×
Ad

ಕಬಕ: ಹಿಂದೂ ಮಹಿಳೆಯ ಶವಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

Update: 2018-06-16 19:11 IST

ಪುತ್ತೂರು, ಜೂ. 16: ಕಬಕದ ವಿದ್ಯಾಪುರ ಜನವಸತಿ ಕಾಲನಿ ನಿವಾಸಿ ಅವಿವಾಹಿತೆ ಭವಾನಿ (52) ಎಂಬವರು ಶನಿವಾರ ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಕುಟುಂಬಸ್ಥರು ಮತ್ತು ಸ್ಥಳೀಯರು ಸಹಕರಿಸದ ಹಿನ್ನೆಲೆಯಲ್ಲಿ ಮುಸ್ಲಿಮ್ ಯುವಕರ ತಂಡವೊಂದು ಎಲ್ಲ ವಿಧಿವಿಧಾನಗಳನ್ನು ಮುಂದೆ ನಿಂತು ನೆರವೇರಿಸಿದ ಘಟನೆ ನಡೆದಿದೆ.

ಅವಿವಾಹಿತರಾಗಿದ್ದ ಭವಾನಿ ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಸಂದರ್ಭ ಮನೆಯಲ್ಲಿದ್ದ ಅವರ ಸಹೋದರ ಕೃಷ್ಣ ಸಂಬಂಧಿಕರಿಗೆ ಹಾಗು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿ, ಅಂತ್ಯ ಸಂಸ್ಕಾರಕ್ಕೆ ಸಹಕರಿಸಲು ವಿನಂತಿಸಿದ್ದರು. ಆದರೆ ಸಂಬಂಧಿಗಳು ಮತ್ತು ಸ್ಥಳೀಯ ನಿವಾಸಿಗಳು ಯಾವುದೇ ರೀತಿಯಲ್ಲಿ ಸಹಕರಿಸದ ಹಿನ್ನೆಲೆಯಲ್ಲಿ ಮಧ್ಯಾಹ್ನದ ವರೆಗೂ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡದೆ ಮನೆಯಲ್ಲೆ ಇರಿಸಲಾಗಿತ್ತು. 

ಈ ಬಗ್ಗೆ ಮಾಹಿತಿ ಅರಿತ ವಿದ್ಯಾಪುರ ನಿವಾಸಿಗಳಾದ  ಶೌಕತ್, ಹಂಝ, ನಝೀರ್, ರಿಯಾಝ್, ಫಾರೂಕ್ ರುಧ್ರಭೂಮಿಗೆ ಪಾವತಿಸಬೇಕಾಗಿದ್ದ ಹಣ ಸಂಗ್ರಹಿಸಿ, ನಂತರ ಮೃತದೇಹದ ಸ್ನಾನ ಮಾಡಿಸಲು ಕುಟುಂಬಸ್ಥರು ಮತ್ತು ಸ್ಥಳೀಯ ಹಿಂದೂ ಮಹಿಳೆಯರು ಸಹಕರಿಸದ ಹಿನ್ನೆಲೆಯಲ್ಲಿ ಅಂಗನವಾಡಿ ಟೀಚರ್ ರಾಜೇಶ್ವರಿ, ಮೃತರ ತಂಗಿ ಮತ್ತು ಸ್ಥಳೀಯರಾದ ಸಫಿಯಾ, ಝುಬೈದ ಎಂಬವರು ಮೃತದೇಹದ ಸ್ನಾನ ಮಾಡಿಸಿ ನಂತರ ಯುವಕರ ನೇತೃತ್ವದಲ್ಲಿ ಆಂಬ್ಯುಲೆನ್ಸ್ ಮೂಲಕ ಪುತ್ತೂರು ರುಧ್ರಭೂಮಿಗೆ ಮೃತದೇಹವನ್ನು ಸಾಗಿಸಿ, ಅಲ್ಲಿ 3500 ರೂ. ಪಾವತಿಸಿ ನಂತರ ಶವಸಂಸ್ಕಾರ ಮಾಡಲಾಯಿತು. 

ನಂತರ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಫಾರೂಕ್ ಅವರು ಯಾವುದೇ ಜಾತಿ ಧರ್ಮ ನೋಡದೆ ಅಂತ್ಯ ಸಂಸ್ಕಾರ ಮಾಡಿದ್ದೇವೆ. ನಾವು ಮುಸ್ಲಿಮ್ ಯುವಕರು ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ಮಾಡಿದ್ದೇವೆ ಅದು ವೈರಲ್ ಆಗಬೇನ್ನುವುದು ನಮ್ಮ ಉದ್ದೇಶವಲ್ಲ. ಇನ್ನು ಯಾವತ್ತೂ ಇಂತಹ ಪ್ರಕರಣ ನಡೆಯಬಾರದು. ಇಂತಹ ಘಟನೆಗಳು ಉತ್ತರಪ್ರದೇಶ, ರಾಜಸ್ಥಾನದಲ್ಲಿ ನಡೆಯುತ್ತಿರುವುದನ್ನು ಮಾಧ್ಯಮದ ಮೂಲಕ ನೋಡುತ್ತಿದ್ದೇವು ಆದರೆ ಅದು ನಮ್ಮ ಊರಿನಲ್ಲೇ ನಡೆಯಿತು ಎಂಬುದು ದೊಡ್ಡ ದುರಂತ ಎಂದು ಅನಿಸುತ್ತಿದೆ. ಇಂತಹ ಘಟನೆ ಇನ್ನು ಯಾವತ್ತೂ ಮರುಕಳಿಸಬಾರದು ಎಂಬುದೇ ನಮ್ಮ ಉದ್ದೇಶ ಎಂದು ತಿಳಿಸಿದರು. 

ಈ ಮಹಿಳೆಯ ಅಂತ್ಯ ಸಂಸ್ಕಾರವನ್ನು ಯಾರು ಮಾಡಬೇಕಿತ್ತೋ ಅವರು ಮಾಡಿಲ್ಲ ಎಂಬುದು ಬೇಸರ ಉಂಟುಮಾಡಿದೆ. ಇಲ್ಲಿ ಹಿಂದೂ ಸಂಘಟನೆಗಳಿವೆ, ಹಿಂದುತ್ವದ ಸಂಘಟನೆಗಳೂ ಇವೆ, ನಾವು ಹಿಂದೂಗಳನ್ನು ದತ್ತು ತೆಗೆದುಕೊಂಡಿದ್ದೇವೆ ಎಂದು ಹೇಳುವಂತಹ ಸಂಘಟನೆಗಳು ಇಂತಹ ಸಮಯದಲ್ಲಿ ಅಲ್ಲಿಗೆ ಬರಲಿಲ್ಲ. ಬಿಜೆಪಿಯನ್ನು ಪ್ರತಿನಿಧಿಸುವ ಕಬಕ ಪಂಚಾಯತ್ ಅಧ್ಯಕ್ಷರು ಕೂಡ ಮೃತರ ಮನೆಗೆ ಭೇಟಿ ನೀಡಿಲ್ಲ ಎಂಬುವುದು ಬೇಸರ ಉಂಟುಮಾಡಿದೆ ಎಂದು ಫಾರೂಕ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News