ಮಣಿಪಾಲ: ‘ದಿ ಅರ್ತ್’ ಶಿಲ್ಪ ಕಲಾಕೃತಿ ಅನಾವರಣ
ಉಡುಪಿ, ಜೂ.16: ಮಣಿಪಾಲದಲ್ಲಿರುವ ಡಾ.ಟಿಎಂಎ ಪೈ ಪ್ಲಾನೆಟೋರಿಯಂ ಸಂಕೀರ್ಣದಲ್ಲಿ ಪ್ರತಿಷ್ಠಾಪಿಸಿರುವ ‘ದಿ ಅರ್ತ್’ ಶಿಲ್ಪ ಕಲಾಕೃತಿ ಯನ್ನು ಮಾಹೆ ಚಾನ್ಸಲರ್ ಡಾ.ರಾಮದಾಸ್ ಪೈ ಅವರ ಪತ್ನಿ ವಸಂತಿ ಆರ್. ಪೈ ಶುಕ್ರವಾರ ಅನಾವರಣಗೊಳಿಸಿದರು.
ಈ ಶಿಲ್ಪ ಕಲಾಕೃತಿಯನ್ನು ಕೆ.ಕೆ.ಹೆಬ್ಬಾರ್ ಆರ್ಟ್ ಫೌಂಡೇಷನ್ ನಿರ್ಮಿಸಿ ಮಾಹೆಗೆ ಸಮರ್ಪಿಸಿದೆ. ಒರಿಸ್ಸಾದ ಉದಯೋನ್ಮುಖ ಕಲಾವಿದರಾದ ಚಿತ್ತರಂಜನ್ ಮೊಹರಾಣ ಅವರು ಬಿಳಿ ಅಮೃತಶಿಲೆಯಲ್ಲಿ ಈ ಕಲಾಕೃತಿಯನ್ನು ರಾಜಸ್ತಾನದ ಮಕರಾನದಲ್ಲಿ ನಿರ್ಮಿಸಿದ್ದು, ಬಳಿಕ ಅದನ್ನು ರಾಜಸ್ತಾನದಿಂದ ಮಣಿಪಾಲಕ್ಕೆ ತೆಗೆದುಕೊಂಡು ಬಂದು ಇಲ್ಲಿ ಪ್ಲಾನೆಟೋರಿಯಂ ಆವರಣದಲ್ಲಿ ಸಾರ್ವಜನಿಕ ವೀಕ್ಷಣೆಗೆ ಪ್ರತಿಷ್ಠಾಪಿಸಲಾಗಿದೆ.
ಕೆ.ಕೆ.ಹೆಬ್ಬಾರ್ ಆರ್ಟ್ ಫೌಂಡೇಷನ್, ಆರಂಭದಿಂದಲೂ ನಾಡಿನ ಉದಯೋನ್ಮುಖ ಕಲಾವಿದರಿಗೆ ಅವರವರ ಕ್ಷೇತ್ರದಲ್ಲಿ ಸ್ಕಾಲರ್‌ಶಿಪ್, ಕಮಿಷನ್ ಹಾಗೂ ಇತರ ರೀತಿಯಲ್ಲಿ ಸಹಾಯ ಹಾಗೂ ಬೆಂಬಲ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದು ಫೌಂಡೇಷನ್‌ನ ಟ್ರಸ್ಟಿ ಆಗಿರುವ ಖ್ಯಾತನಾಮ ಕಲಾವಿದ ಕೆ.ಕೆ.ಹೆಬ್ಬಾರ್‌ರ ಪುತ್ರಿ ರೇಖಾ ರಾವ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಹೆಯಲ್ಲಿರುವ ಕೆ.ಕೆ.ಹೆಬ್ಬಾರ್ ಗ್ಯಾಲರಿ ಹಾಗೂ ಆರ್ಟ್ಸ್ ಸೆಂಟರ್‌ಗೆ ಎರಡು ಹೊಸ ಪೈಂಟಿಂಗ್‌ನ್ನು ಕೆ.ಕೆ.ಹೆಬ್ಬಾರ್‌ರ ನಿಕಟ ಸಂಬಂಧಿ ನಾರಾಯಣ ಹೆಬ್ಬಾರ್ ಕೊಡುಗೆಯಾಗಿ ನೀಡಿದರು.
‘ದಿ ಅರ್ತ್’ ಕಲಾಕೃತಿ ಹಿಂದಿರುವ ಸ್ಪೂರ್ತಿ ಮತ್ತು ಪರಿಕಲ್ಪನೆ, ಭೂಮಿಯ ಮೇಲೆ ಆಗುತ್ತಿರುವ ಪ್ರಾಕೃತಿಕ ಹಾಗೂ ಪರಿಸರ ಸಂಬಂಧಿ ಅಸಮತೋಲನ ಹಾಗೂ ವಿಕಾರಗಳನ್ನು ಜನತೆಯ ಮುಂದಿಡುವುದಾಗಿದೆ ಎಂದು ಕಲಾ ಇತಿಹಾಸಕಾರರಾದ ರಂಜನಿ ಪ್ರಸನ್ನ ತಿಳಿಸಿದರು. ಮಾಹೆಯ ಕುಲಪತಿ ಡಾ. ಎಚ್.ವಿನೋದ್ ಭಟ್ ಅವರೂ ಈ ಸಂದರ್ಭದಲ್ಲಿ ಮಾತನಾಡಿದರು.