ಉಡುಪಿ: ಪ್ರತಾಪ್‌ಚಂದ್ರ ಶೆಟ್ಟರಿಗೆ ಸಚಿವ ಪದವಿ ನೀಡಲು ಆಗ್ರಹ
ಉಡುಪಿ, ಜೂ.16: ನಾಲ್ಕು ಬಾರಿ ವಿಧಾನಸಭಾ ಸದಸ್ಯರಾಗಿ, ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಬೇಕೆಂದು ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಂಚಾಯತ್‌ರಾಜ್ ಸಂಘಟನೆ ಆಗ್ರಹಿಸಿದೆ.
ಪ್ರತಾಪ್‌ಚಂದ್ರ ಶೆಟ್ಟಿ ಪಕ್ಷದ ಹಿರಿಯ ನಾಯಕರಾಗಿದ್ದು, ಪಕ್ಷ ನಿಷ್ಠ ಹಾಗೂ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ. ಅಧಿಕಾರಕ್ಕಾಗಿ ಲಾಭಿಯಾಗಲಿ, ಈ ಹಿಂದೆ ಶಾಸಕರಾಗಿದ್ದಾಗ ಸಚಿವ ಸ್ಥಾನ, ನಿಗಮ ಮಂಡಳಿಯನ್ನಾಗಲಿ ಪಡೆದವರಲ್ಲ. ಇಂದಿನವರೆಗೂ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ, ಪಕ್ಷದ ನಾಯಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದಾರೆ ಎಂದು ಅವು ಹೇಳಿದೆ.
ಪ್ರತಾಪಚಂದ್ರ ಶೆಟ್ಟರು ಜಿಲ್ಲೆಯ ಒಬ್ಬ ಜಾತ್ಯಾತೀತ ನಾಯಕರಾಗಿದ್ದು ಅಪಾರ ಅನುಭವ ಹೊಂದಿದ ಹಿರಿಯ ಮುತ್ಸದ್ದಿಯಾಗಿದ್ದಾರೆ. ಸ್ಥಳಿಯಾಡಳಿತ ಸಂಸ್ಥೆಗಳ ಸದಸ್ಯರಿಂದ ಆಯ್ಕೆಯಾಗಿರುವ ಇವರು ಜಿಲ್ಲೆಯ ಸಮಸ್ಯೆಗಳಾದ ಕೃಷಿ, ನೀರಾವರಿ, ಸಿಆರ್‌ಝಡ್, ಡೀಮ್ಡ್ ಫಾರೆಸ್ಟ್‌ಗಳ ಬಗ್ಗೆ ಸಮಗ್ರ ಅರಿವು ಹೊಂದಿದ್ದು, ಈ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲರು. ಇವರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸ್ಥಾನ ದೊರೆತಲ್ಲಿ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.