×
Ad

ಸೌಹಾರ್ದತೆಗಾಗಿ ಮಠದಿಂದ ಸ್ನೇಹಕೂಟ: ಪೇಜಾವರ ಶ್ರೀ

Update: 2018-06-16 20:55 IST

ಉಡುಪಿ, ಜೂ.16: ಉತ್ತರ ಭಾರತದ ಪ್ರವಾಸದಲ್ಲಿದ್ದ ಹಿನ್ನೆಲೆಯಲ್ಲಿ ಈ ಬಾರಿ ಇಫ್ತಾರ್ ಕೂಟ ಆಯೋಜಿಸಲು ಸಾಧ್ಯವಾಗಿಲ್ಲ. ಸೌಹಾರ್ದತೆಗೆ ಇಫ್ತಾರ್ ಕೂಟವೇ ಆಗಬೇಕಿಲ್ಲ. ಸ್ನೇಹಕೂಟ ಕೂಡ ಮಾಡಬಹುದು. ಸರಿಯಾದ ಸಂದರ್ಭ ನೋಡಿ ಮಠದ ವತಿಯಿಂದ ಎಲ್ಲಾ ಧರ್ಮೀಯರಿಗೂ ಸ್ನೇಹಕೂಟವನ್ನು ಆಯೋಜಿಸಲಾಗುವುದು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಈದುಲ್ ಫಿತ್ರ್ ಪ್ರಯುಕ್ತ ಮುಸ್ಲಿಮ್ ನಾಯಕರು ಪೇಜಾವರ ಮಠದಲ್ಲಿ ಶುಕ್ರವಾರ ತಮಗೆ ಸಲ್ಲಿಸಿದ ಗೌರವ ಸ್ವೀಕರಿಸಿ ಅವರು ಮಾಧ್ಯಮದವರ ಜೊತೆ ಮಾತನಾಡುತಿದ್ದರು.

ಸ್ನೇಹ ಕೂಟಕ್ಕೆ ದಿನ ನಿಗದಿಯಾಗಿಲ್ಲ. ಕಳೆದ ವರ್ಷವೂ ಉಪವಾಸ ಸಂದರ್ಭ ದಲ್ಲಿ ನಾವು ಸ್ನೇಹ ಕೂಟವನ್ನೇ ಮಾಡಿರುವುದು. ಈ ಬಾರಿಯ ಸ್ನೇಹಕೂಟಕ್ಕೆ ಮುಸ್ಲಿಮರು ಮಾತ್ರವಲ್ಲ ಕ್ರೈಸ್ತರನ್ನು ಸಹ ಕರೆಯುತ್ತೇವೆ. ಹಿಂದೂಗಳು ಮುಸ್ಲಿಮರ ಹಾಗೂ ಮುಸ್ಲಿಮರು ಹಿಂದೂಗಳ ಕೆಲ ಬೇಡಿಕೆಗಳನ್ನು ನಡೆಸಿ ಕೊಡಬೇಕು. ಇಂತಹ ಸ್ನೇಹಕೂಟ, ಮಾತುಕತೆಯಿಂದ ಮಾತ್ರವೇ ಮತ್ತಷ್ಟು ಸಮನ್ವಯ ಸಾಧ್ಯವಾಗುತ್ತದೆ ಎಂದರು.

ನಮ್ಮಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ. ರಾಜಕಾರಣಿಗಳು ಮುಸ್ಲಿಮರ ತುಷ್ಟೀಕರಣ ಮಾಡಿದರೆ ನಾವು ಸೌಹಾರ್ದ ಬಯಸುತ್ತೇವೆ. ದೇಶದಲ್ಲಿ ಪರಸ್ಪರ ಪ್ರೀತಿ, ಸಹಕಾರ, ಸಾಮರಸ್ಯ ನಿರ್ಮಾಣವಾಗಬೇಕು. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಎಲ್ಲರೂ ಶಾಂತಿ ಸೌಹಾರ್ದ ಬೆಳೆಯಲು ಸಹಕರಿಸಬೇಕೆಂದು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪೇಜಾವರ ಶ್ರೀ ಬ್ಲಡ್ ಡೊನೆಟಿಂಗ್ ಟೀಮ್‌ನ ಅಧ್ಯಕ್ಷ ಆರೀಫ್ ದೊಡ್ಡಣಗುಡ್ಡೆ, ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಹ್ಮದ್ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News