ಕೋಟೇಶ್ವರ: ಪರಿಸರ ಸ್ನೇಹಿ ‘ಬ್ಯಾರೀಸ್ ಗ್ರೀನ್ ಅವೆನ್ಯೂ’ ಜೂ. 17ರಂದು ಉದ್ಘಾಟನೆ
ಕುಂದಾಪುರ, ಜೂ.16: ಕೋಟೇಶ್ವರದಲ್ಲಿ ನಿರ್ಮಾಣವಾಗಿರುವ ಪ್ರತಿಷ್ಠಿತ ಐಜಿಬಿಸಿ ಪ್ಲಾಟಿನಂ ದೃಢೀಕರಣದ ಗೌರವಕ್ಕೆ ಪಾತ್ರವಾದ ಬ್ಯಾರೀಸ್ ಗ್ರೂಪ್‌ನ ನೂತನ ಪರಿಸರ ಸ್ನೇಹಿ ವಸತಿ ಸಮುಚ್ಚಯ ‘ಬ್ಯಾರೀಸ್ ಗ್ರೀನ್ ಅವೆನ್ಯೂ’ ಜೂ.17ರಂದು ಬೆಳಗ್ಗೆ 10ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರೂಪ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ "1.10 ಲಕ್ಷ ಚದರ ಅಡಿ ವಿಸ್ತೀರ್ಣದ ಈ ವಸತಿ ಸಮುಚ್ಚಯದಲ್ಲಿ ಏಳು ಮಹಡಿ ಹಾಗೂ 62 ಫ್ಲ್ಯಾಟ್‌ಗಳಿವೆ. ವಿನೂತನ ವಿನ್ಯಾಸ ಹಾಗು ಹಲವು ವೈಶಿಷ್ಟ್ಯಗಳಿರುವ ಈ ಸಮುಚ್ಚಯ ಉದ್ಘಾಟನೆಗೆ ಮೊದಲೇ ಐಜಿಬಿಸಿ ( ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ) ಪ್ಲಾಟಿನಂ ದೃಢೀಕರಣ ಗೌರವಕ್ಕೆ ಪಾತ್ರವಾಗಿರುವುದು ವಿಶೇಷ. ಪರಿಸರ ಸ್ನೇಹಿ ಕಟ್ಟಡಕ್ಕೆ ಕೇವಲ ಹಣ ಇದ್ದರೆ ಸಾಲದು. ಮುಖ್ಯವಾಗಿ ಸಮಯ ಮತ್ತು ತುಡಿತ ಬೇಕಾಗುತ್ತದೆ " ಎಂದು ಹೇಳಿದರು.
ಇಡೀ ಕಟ್ಟಡಕ್ಕೆ ಎಲ್‌ಇಡಿ ಲೈಟ್ ಗಳನ್ನು ಅಳವಡಿಸಲಾಗಿದ್ದು, ಅದಕ್ಕೆ ಸೌರ ವಿದ್ಯುತ್ ಬಳಸಲಾಗುತ್ತದೆ. ಇಲ್ಲಿ ಮಳೆಯ ನೀರು ಪೋಲು ಆಗದಂತೆ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ 18 ಬಾವಿಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಬಳಸಲಾದ ನೀರನ್ನು ಮರು ಬಳಕೆ ಮಾಡಿ, ಗಾರ್ಡನ್‌ಗೆ ಉಪಯೋಗಿಸಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಟ್ಯಾಂಕ್ ಮಾಡಲಾಗಿದೆ. ಇದು ಝಿರೋ ಡಿಸ್ಚಾರ್ಜ್ ಬಿಲ್ಡಿಂಗ್. ಇಲ್ಲಿನ ನೀರು ಎಲ್ಲಿಯೂ ಹೊರಗೆ ಹೋಗುವುದಿಲ್ಲ. ತೆರೆದ ಪಾರ್ಕಿಂಗ್‌ನಲ್ಲಿ ಗಾರ್ಡನ್ ನಿರ್ಮಿಸಲಾಗಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೋಟ ಜನತಾ ಫಿಶರೀಸ್‌ನ ಅಧ್ಯಕ್ಷ ಆನಂದ ಕುಂದರ್, ಕುಂದಾಪುರ ಪ್ರಭಾಕರ ಟೈಲ್ ವರ್ಕ್ಸ್‌ನ ಆಡಳಿತ ಪಾಲುದಾರ ಪ್ರಕಾಶ್ ಟಿ. ಸೋನ್ಸ್, ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಬ್ಯಾರೀಸ್ ಗ್ರೂಪ್ ಮತ್ತು ಬ್ಯಾರೀಸ್ ಏಜುಕೇಶನ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಗ್ರೂಪ್ ಗ್ರೀನ್ ಇನಿಶಿಯೇಟಿವ್‌ನ ಜನರಲ್ ಮೆನೇಜರ್ ರಮೇಶ್ ಸುತಾರ್, ಸಿವಿಲ್‌ನ ಜನರಲ್ ಮೆನೇಜರ್ ಈಶ್ವರನ್, ಭೂ ಮಾಲಕ ಸುಲೈಮಾನ್, ಆರ್ಕಿಟೆಕ್ಟ್ ಇಕ್ಬಾಲ್, ಗ್ರೂಪ್‌ನ ನಿರ್ದೇಶಕ ಸಿದ್ದೀಕ್ ಬ್ಯಾರಿ, ಹಿರಿಯ ಪರ್ತಕರ್ತ ಎಎಸ್‌ಎನ್ ಹೆಬ್ಬಾರ್, ಅಶ್ರಫ್ ಬ್ಯಾರಿ ಉಪಸ್ಥಿತರಿದ್ದರು.