ಚಾಲಕನ ಮೇಲೆ ಎಡಿಜಿಪಿ ಪುತ್ರಿಯಿಂದ ಹಲ್ಲೆ: ಬಟಾಲಿಯನ್ ಮುಖ್ಯಸ್ಥ ಹುದ್ದೆಯಿಂದ ತಂದೆ ವಜಾ
ತಿರುವನಂತಪುರ,ಜೂ.16: ತನ್ನ ಕಿರಿಯ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಕ್ಕಾಗಿ ಮತ್ತು ಕಚೇರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಎಡಿಜಿಪಿ ಸುದೇಶ್ ಕುಮಾರ್ ಅವರನ್ನು ಸಶಸ್ತ್ರ ಪೊಲೀಸ್ ಬಟಾಲಿಯನ್‌ನ ಮುಖ್ಯಸ್ಥನ ಹುದ್ದೆಯಿಂದ ವಜಾಗೊಳಿಸಲಾಗಿದೆ. ಅವರಿಗೆ ಈವರೆಗೆ ಯಾವುದೇ ಹೊಸ ಹುದ್ದೆಯನ್ನು ತೋರಿಸಲಾಗಿಲ್ಲ.
ಕುಮಾರ್ ಅವರ ಪುತ್ರಿ ಬುಧವಾರ ಬೆಳಿಗ್ಗೆ ತನ್ನ ತಂದೆಯ ಅಧಿಕೃತ ಕಾರಿನಲ್ಲಿ ನಗರದಲ್ಲಿಯ ಮ್ಯೂಝಿಯಂ ಮೈದಾನಕ್ಕೆ ಬೆಳಗಿನ ವಾಯುವಿಹಾರಕ್ಕೆ ತೆರಳಿದ್ದು,ಮರಳುವ ಸಮಯದಲ್ಲಿ ಪಾರ್ಕಿಂಗ್‌ನಿಂದ ಕಾರನ್ನು ತರುವಲ್ಲಿ ವಿಳಂಬವಾಗಿದ್ದಕ್ಕೆ ಪೊಲೀಸ್ ಚಾಲಕ ಅಬ್ದುಲ್ ಕರೀಂ ಗವಾಸ್ಕರ್‌ಗೆ ಹಲ್ಲೆ ನಡೆಸಿ,ಅವಾಚ್ಯವಾಗಿ ನಿಂದಿಸಿದ್ದಳು. ಈ ಹಿನ್ನೆಲೆಯಲ್ಲಿ ಕುಮಾರ್ ವಿರುದ್ಧ ಈ ಕ್ರಮವನ್ನು ಜರುಗಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗವಾಸ್ಕರ್ ಪೊಲೀಸ್ ದೂರನ್ನು ದಾಖಲಿಸಿದ್ದರು.
ಚಾಲಕ ತನ್ನನ್ನು ನಿಂದಿಸಿದ್ದ ಮತ್ತು ತನ್ನ ಮಾನಭಂಗಕ್ಕೆ ಯತ್ನಿಸಿದ್ದ ಎಂದು ಕುಮಾರ್ ಪುತ್ರಿ ಪ್ರತಿದೂರನ್ನು ದಾಖಲಿಸಿದ ಬಳಿಕ ಈ ಪ್ರಕರಣ ಇನ್ನಷ್ಟು ಕಾವು ಪಡೆದುಕೊಂಡಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳ ಕಚೇರಿಯು ಸಿಟಿ ಕ್ರೈಂ ಬ್ರಾಂಚ್‌ಗೆ ಆದೇಶಿಸಿತ್ತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿದ್ದ ಗವಾಸ್ಕರ್ ಪತ್ನಿ ತನ್ನ ಪತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದ್ದರು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಮತ್ತು ಆರೋಪಿಯ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು.
ಕುಮಾರ್ ನಿವಾಸದಲ್ಲಿ ತನ್ನನ್ನು ಮಾತ್ರವಲ್ಲ. ಅಲ್ಲಿರುವ ಕಿರಿಯ ಸಹೋದ್ಯೋಗಿ ಗಳನ್ನೂ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ಅವರಿಂದ ಮನೆಗೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಗವಾಸ್ಕರ್ ಸುದ್ದಿಗಾರರಿಗೆ ತಿಳಿಸಿದರು.
ಎರಡೂ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಡಿಜಿಪಿ ಲೋಕನಾಥ ಬಹೇರಾ ಹೇಳಿದ್ದಾರೆ.