×
Ad

ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಿದ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಶೇ.69 ಅಸಂಪೂರ್ಣ

Update: 2018-06-16 22:37 IST

ಹೊಸದಿಲ್ಲಿ, ಜೂ.16: ಮೇ 17ರಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಅರ್ಪಿಸಿದ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಶೇ. 69 ಅಸಂಪೂರ್ಣವಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 82 ಕಿ.ಮೀ ಉದ್ದದ 7,500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ದಿಲ್ಲಿ ಗಡಿಭಾಗದಲ್ಲಿರುವ ನಿಝಾಮುದ್ದೀನ್ ಸೇತುವೆಯಿಂದ ದಿಲ್ಲಿ-ಉತ್ತರ ಪ್ರದೇಶ ಗಡಿಯವರೆಗಿನ ಕೇವಲ 8.36 ಕಿ.ಮೀ ಉದ್ದದ ಮೊದಲ ಹಂತದ ರಸ್ತೆಯನ್ನಷ್ಟೇ ಮೋದಿ ಉದ್ಘಾಟಿಸಿದ್ದಾರೆ ಎಂದು ವರದಿ ತಿಳಿಸಿದೆ. ಇದರ ವಾಹನ ಸವಾರರು ಹಿಂದಿನ ಕಿರಿದಾದ ಚತುಷ್ಪಥ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.

ಈ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸುವ ವೇಳೆ ಮೋದಿ ಮೊದಲ ಹಂತವನ್ನು ಕೇವಲ ಹದಿನೆಂಟು ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಅವರೇ ಖುದ್ದು ಈ ಯೋಜನೆಗೆ ಮೂವತ್ತು ತಿಂಗಳ ಹಿಂದೆ 2015ರ ಡಿಸೆಂಬರ್‌ನಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು ಎಂದು ವರದಿ ತಿಳಿಸಿದೆ. ಉ.ಪ್ರ ಗಡಿಯಿಂದ ದಸಾನಾ, ದಸಾನಾದಿಂದ ಹಪುರ್ ಹಾಗೂ ದಸಾನಾದಿಂದ ಮೀರತ್‌ವರೆಗಿನ ಗ್ರೀನ್‌ಫೀಲ್ಡ್ ಈ ಮೂರು ಹಂತಗಳ ಆರುಪಥಗಳ ಎಕ್ಸ್‌ಪ್ರೆಸ್‌ವೇ ಇನ್ನಷ್ಟೇ ಸಂಪೂರ್ಣಗೊಳ್ಳಬೇಕಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಆರ್.ಪಿ ಸಿಂಗ್ ತಿಳಿಸುವಂತೆ, 82 ಕಿ.ಮೀ ವ್ಯಾಪ್ತಿಯ ದಿಲ್ಲಿ-ಮೀರತ್ ಎಕ್ಸ್‌ಪ್ರೆಸ್‌ವೇಯ ಕೇವಲ ಶೇ.31 ಭಾಗವಷ್ಟೇ ಸಂಪೂರ್ಣಗೊಂಡಿದ್ದು ಉಳಿದ ಭಾಗವು ಇನ್ನಷ್ಟೇ ಸಂಪೂರ್ಣಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News