ಕರ್ಕಶ ಹಾರ್ನ್, ಸೈಲೆನ್ಸರ್ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಣೆ
ಉಡುಪಿ, ಜೂ.16: ಎಲ್ಲಾ ರೀತಿಯ ವಾಹನಗಳಲ್ಲಿ ಕರ್ಕಶ ಹಾರ್ನ್ ಹಾಗೂ ವಿಪರೀತ ಶಬ್ಬ (ಸೈಲೆನ್ಸರ್) ಗಳ ವಿರುದ್ಧ ಜಿಲ್ಲೆಯಾದ್ಯಂತ ಒಂದು ವಾರ ಕಾಲ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಇದರಲ್ಲಿ ಡಿವೈಎಸ್ಪಿ ಹಾಗೂ ಪಿಎಸ್‌ಐಗಳು ಪಾಲ್ಗೊಳ್ಳಲಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ.ನಿಂಬರಗಿ ಹೇಳಿದ್ದಾರೆ.
ಬನ್ನಂಜೆಯ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿ ಅದಕ್ಕೆ ಉತ್ತರಿಸಿದ ಬಳಿಕ ತಿಳಿಸಿದರು.
ಕೊಲ್ಲೂರು ದೇವಸ್ಥಾನದ ಸುತ್ತಮುತ್ತ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಬಂದ ದೂರಿಗೆ ಸ್ಪಂಧಿಸಿದ ಅವರು, ಇಂಥ ದೂರು ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ಗಂಟೆಯ ಅವಧಿಯಲ್ಲಿ ಒಟ್ಟು 21 ದೂರುಗಳನ್ನು ಅವರು ಸ್ವೀಕರಿಸಿದರು. ಇವುಗಳಲ್ಲಿ ಐದು ಕರೆಗಳು ಮಟ್ಕಾ ದಂಧೆ ವಿರುದ್ಧವೇ ಬಂದಿತ್ತು. ಮಟ್ಕಾ ವಿರುದ್ಧ ಹಿಂದೆ ದೂರುಗಳು ಬಂದಾಗ ಆರೋಪಿಗಳನ್ನು ಕರೆಸಿ ಎಚ್ಚರಿಕೆ ನೀಡಿದಾಗ ಅದು ನಿಂತಿತ್ತು. ಈಗ ಮತ್ತೆ ಅದು ಪುನರಾರಂಭಗೊಂಡಂತಿದೆ ಎಂದವರು ನುಡಿದರು. ಮಟ್ಕಾ ಗಂಗೊಳ್ಳಿ, ಬೈಂದೂರು ಹಾಗೂ ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದರು.
ಉಡುಪಿ ಪಿಪಿಸಿ ರಸ್ತೆಯಲ್ಲಿ ಎರಡೂ ಕಡೆಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿ ರುವುದು ಹಾಗೂ ರಸ್ತೆ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ, ಕಾಪು, ಇನ್ನಂಜೆ, ಶಂಕರಪುರಕ್ಕೆ ಖಾಸಗಿ ಹಾಗೂ ನರ್ಮ್ ಎರಡೂ ಬಸ್‌ಗಳ ಸಂಚಾರ ನಿಂತಿರುವ ಬಗ್ಗೆ ಸಾರ್ವಜನಿಕರು ದೂರಿದರು.
ಕುಂದಾಪುರದಲ್ಲಿ ಖಾಸಗಿ ಬಸ್ ಚಾಲಕರು ಹಾಗೂ ನಿರ್ವಾಹಕರು ಸಮವಸ್ತ್ರ ಧರಿಸದ, ರಸ್ತೆ ನಿಯಮ ಪಾಲಿಸದ ಕುರಿತು ದೂರು ಬಂದಾಗ, ಕೂಡಲೇ ಖಾಸಗಿ ಬಸ್ ಮಾಲಕರು, ಸಿಬ್ಬಂದಿಗಳ ಸಭೆ ನಡೆಸಿ ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಬಾರಕೂರಿನಲ್ಲಿ ಕಾಲೇಜು ಬಳಿಯ ಗೂಡಂಗಡಿಗಳಲ್ಲಿ ಸಿಗರೇಟು ಮಾರಾಟ ಮಾಡುತ್ತಿರುವ ಕುರಿತು, ನಾಡಗುಡ್ಡೆಯಂಗಡಿ ಗ್ರಾಪಂನಲ್ಲಿ ಲಂಚ ನೀಡದೇ ಯಾವುದೇ ಕೆಲಸ ಆಗದ ಕುರಿತು ಅಲ್ಲಿನ ನಾಗರಿಕರೊಬ್ಬರು ದೂರು ನೀಡಿದರು. ಸಾಸ್ತಾನ, ಸಾಲಿಗ್ರಾಮ, ಕೋಟದಲ್ಲಿ ರಾ.ಹೆದ್ದಾರಿ ಬಳಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುದರಿಂದ ವಾಹನ ಚಾಲಕರಿಗೆ ತೊಂದರೆ ಯಾಗುತ್ತಿರುವ ಬಗ್ಗೆಯೂ ದೂರು ಕೇಳಿಬಂತು.
ಮೇ 25ರಿಂದ ಜೂ.15ರವರೆಗೆ ಮಟ್ಕಾದ ಐದು ಕೇಸು ದಾಖಲಾಗಿ ಆರು ಮಂದಿಯ ಬಂಧನ, ಇಸ್ಪಿಟ್,ಜೂಜು ಕುರಿತು ಮೂರು ಕೇಸು 17 ಬಂಧನ, ಅಕ್ರಮ ಮದ್ಯದ 5 ಕೇಸು, 7ಬಂಧನ, ಕೋಟ್ಪಾದ 140 ಪ್ರಕರಣ, ಮದ್ಯ ಸೇವಿಸಿ ವಾಹನ ಚಲಾಯಿಸಿದ 23, ಕರ್ಕಶ ಹಾರ್ನ್‌ನ 145, ಚಾಲನೆ ವೇಳೆ ಮೊಬೈಲ್ ಬಳಕೆಯ 49, ಹೆಲ್ಮಟ್ ರಹಿತ 2,627 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಲಕ್ಷ್ಮಣ್ ನಿಂಬರಗಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕುರಿತು ಎಂಐಟಿಯ ತಜ್ಞರು ನೀಡಿರುವ ವರದಿಯ ಕುರಿತು ಹೆದ್ದಾರಿ ಪ್ರಾಧಿಕಾರದವರೊಂದಿಗೆ ಚರ್ಚೆ ನಡೆಸಲು ಜಿಲ್ಲಾಧಿಕಾರಿಯ ವರೊದಿಗೆ ಸಮಾಲೋಚಿಸಿ ದಿನ ನಿಗದಿ ಪಡಿಸುವುದಾಗಿ ಅವರು ಭರವಸೆ ನೀಡಿದರು.