ಬೋಳಾರದಲ್ಲಿ ಮನೆ ಕುಸಿತ: ಮನೆಮಂದಿ ಅಪಾಯದಿಂದ ಪಾರು
ಮಂಗಳೂರು, ಜೂ.16: ದ.ಕ. ಜಿಲ್ಲೆಯಲ್ಲಿ ಎರಡ್ಮೂರು ದಿನದಿಂದ ಮುಂಗಾರು ಭಾರೀ ಇಳಿಮುಖವಾಗಿದೆ. ಶುಕ್ರವಾರ ಮಳೆ ಬದಲು ಬಿಸಿಲು ಕಾಣಿಸಿಕೊಂಡಿದ್ದರೆ, ಶನಿವಾರ ಮುಂಜಾನೆ ಸ್ವಲ್ಪ ಮಳೆಯಾಗಿತ್ತು. ಉಳಿದಂತೆ ದಿನವಿಡೀ ಬಿಸಿಲಿನ ವಾತಾವರಣವಿತ್ತು. ಈ ಮಧ್ಯೆ ನಗರದ ಬೋಳಾರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದು ಕುಸಿದು ಬಿದ್ದಿದೆ. ಹಸುಳೆಯೂ ಸೇರಿದಂತೆ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೋಳಾರದ ಜೊಯ್‌ಲ್ಯಾಂಡ್ ಶಾಲೆ ಸಮೀಪ ಶನಿವಾರ ಮಧ್ಯಾಹ್ನದ ವೇಳೆಗೆ ಮಣ್ಣಿನ ಗೋಡೆಯಿದ್ದ ಹಳೆಯ ಮನೆಯ ಛಾವಣಿಯು ಏಕಾಏಕಿ ಬಿತ್ತು. ಈ ಮನೆಯಲ್ಲಿ ಮೂರು ಬಡ ಕುಟುಂಬಗಳು ಬಾಡಿಗೆ ಆಧಾರದಲ್ಲಿ ವಾಸವಾಗಿದ್ದವು. ಛಾವಣಿ ಬಿದ್ದಾಗ ಒಂದು ಮನೆಯ ಗೃಹಿಣಿಯು ತಮ್ಮ ಮಗುವಿಗೆ ಊಟ ಮಾಡಿಸಲೆಂದು ಮನೆ ಹೊರಗೆ ಕರೆತಂದಿದ್ದರು. ಇನ್ನೊಂದು ಮನೆಯ ಮಹಿಳೆ ಕೂಡ ಅಂಗಡಿಗೆ ತೆರಳಿದ್ದರು. ಈ ಮಧ್ಯೆ ಹಠಾತ್ ಆಗಿ ಛಾವಣಿಯ ಮರದ ಸಲಕರಣೆಗಳೆಲ್ಲಾ ಕುಸಿದು ಬಿದ್ದವು. ಕ್ಷಣಾರ್ಧದಲ್ಲಿ ಈ ಅವಘಡ ನಡೆದಿದ್ದು, ಮನೆ ಮಂದಿ ಆಘಾತಕ್ಕೊಳಗಾಗಿದ್ದಾರೆ.
ಬಾಡಿಗೆ ಮನೆಯೊಂದರ ಯಜಮಾನ ನಾರಾಯಣ ಶೆಟ್ಟಿ ವಾಚ್‌ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದರೆ, ಇನ್ನೊಂದು ಮನೆಯಲ್ಲಿ ಪ್ರಮೀಳಾ ಎಂಬವರ ಕುಟುಂಬ ವಾಸವಾಗಿದೆ. ಪ್ರಮೀಳಾ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಕುಸಿದಿರುವುದರಿಂದ ಇವರೆಲ್ಲರ ಬದುಕು ಅತಂತ್ರವಾಗಿದೆ. ಮನೆಯಲ್ಲಿದ್ದ ಪಾತ್ರೆ ಪಗಡೆಗಳನ್ನೆಲ್ಲ ಹೊರಗಿಟ್ಟು ಹೊಸ ವಾಸ್ತವ್ಯದ ಚಿಂತೆಯಲ್ಲಿದ್ದಾರೆ.
ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಕಾರ್ಪೊರೇಟರ್, ತಹಸೀಲ್ದಾರ್ ಭೇಟಿ ನೀಡಿ ನೆಲೆ ಕಳೆದುಕೊಂಡ ಕುಟುಂಬಗಳಿಗೆ ತುರ್ತು ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.