ಹಿಂದೂ ಭಯೋತ್ಪಾದನೆ ಅಲ್ಲ, 'ಸಂಘಿ ಭಯೋತ್ಪಾದನೆ': ದಿಗ್ವಿಜಯ್ ಸಿಂಗ್

Update: 2018-06-16 18:31 GMT

ಭೋಪಾಲ, ಜೂ. 16: ನಾನು ಯಾವಾಗಲೂ ‘ಸಂಘಿ ಭಯೋತ್ಪಾದನೆ’ ಎಂದು ಹೇಳಿದ್ದೇನೆಯೇ ಹೊರತು ‘ಹಿಂದೂ ಭಯೋತ್ಪಾದನೆ’ ಎಂದು ಎಂದೂ ಹೇಳಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಶುಕ್ರವಾರ ಹೇಳಿದ್ದಾರೆ. ‘‘ನಾನು ಹಿಂದೂ ಭಯೋತ್ಪಾದನೆ ಎಂಬ ಪದ ಬಳಸಿದ್ದೇನೆ ಎಂಬುದಾಗಿ ನಿಮ್ಮಲ್ಲಿ ತಪ್ಪು ಗ್ರಹಿಕೆ ಇದೆ. ನಾನು ಯಾವಾಗಲೂ ಸಂಘಿ ಭಯೋತ್ಪಾದನೆ ಎಂಬ ಪದ ಬಳಸುತ್ತೇನೆ.’’ ಎಂದು ಅವರು ಹೇಳಿದ್ದಾರೆ. ‘‘ಭಯೋತ್ಪಾದನೆ ಚಟುವಟಿಕೆಗಳನ್ನು ಧರ್ಮದ ಆಧಾರದಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಯಾವುದೇ ಧರ್ಮ ಭಯೋತ್ಪಾದನೆ ಬೆಂಬಲಿಸದು’’ ಎಂದು ಸಿಂಗ್ ಹೇಳಿದ್ದಾರೆ.

‘ಸಂಘಿ ಭಯೋತ್ಪಾದನೆ’ ಪದದ ಕುರಿತು ತನ್ನ ನಿಲುವನ್ನು ಪುನರುಚ್ಚರಿಸಿರುವ ಅವರು, ‘‘ಸಂಘ ಸಿದ್ಧಾಂತದಿಂದ ಪ್ರೇರಿತರಾದ ಜನರು ಬಾಂಬ್ ಸ್ಫೋಟ ನಡೆಸುತ್ತಾರೆ. ಇದು ಮಾಲೇಗಾಂವ್ ಸ್ಫೋಟ, ಮೆಕ್ಕಾ ಸ್ಫೋಟ, ಸಂರೆತಾ ಎಕ್ಸ್‌ಪ್ರೆಸ್ ಸ್ಫೋಟ ಅಥವಾ ದರ್ಗಾ ಶರೀಫ್ ಸ್ಫೋಟ ಆಗಿರಬಹುದು’’ ಎಂದಿದ್ದಾರೆ. ಆರೆಸ್ಸೆಸ್ ಹಿಂಸಾಚಾರವನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿರುವ ಅವರು, ‘‘ಈ ಸಂಘಟನೆ ಹಿಂಸಾಚಾರ ಹಾಗೂ ದ್ವೇಷವನ್ನು ಹರಡುತ್ತಿದೆ. ಅಲ್ಲದೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ’’ ಎಂದರು. ಆದರೆ, ‘ಸಂಘಿ ಭಯೋತ್ಪಾದನೆ’ ಪದ ಬಳಕೆಗೆ ಬಿಜೆಪಿ ಸಿಂಗ್ ಅವರನ್ನು ಟೀಕಿಸಿದೆ. ಇದು ಅವರ ಪಲಾಯನವಾದ. ಈ ಹೇಳಿಕೆಯಿಂದ ಸಂಘದಲ್ಲಿ ಭಾಗಿಯಾಗಿದ್ದವರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News