ಮೊಸುಲ್‌ಗೆ ಹಾಲಿವುಡ್ ನಟಿ ಆ್ಯಂಜೆಲಿನಾ ಜೋಲಿ ಭೇಟಿ

Update: 2018-06-17 16:57 GMT

ಮೊಸುಲ್.ಜೂ. 17: ಐಸಿಸ್ ಭಯೋತ್ಪಾದಕ ಗುಂಪಿನ ಮೂರು ವರ್ಷಗಳ  ಹಿಡಿತದಿಂದ ವಿಮೋಚನೆಗೊಂಡ ಇರಾಕ್‌ನ ಮೊಸುಲ್ ನಗರಕ್ಕೆ ವಿಶ್ವಸಂಸ್ಥೆಯ ನಿರಾಶ್ರಿತರಿಗಾಗಿನ ಹೈಕಮಿಶನರ್ ಅವರ ವಿಶೇಷ ಪ್ರತಿನಿಧಿ, ಹಾಲಿವುಡ್ ನಟಿ ಆ್ಯಂಜೆಲಿನಾ ಜೋಲಿ ಶನಿವಾರ ಭೇಟಿ ನೀಡಿದ್ದಾರೆ.

  2001ರಿಂದೀಚೆಗೆ ಯುದ್ಧಪೀಡಿತ ಇರಾಕ್‌ಗೆ ಆ್ಯಂಜೆಲಿನಾ ಜೋಲಿ ನೀಡಿರುವ ಐದನೆ ಭೇಟಿ ಇದಾಗಿದೆ. ಈದುಲ್‌ಫಿತ್ರ್ ಹಬ್ಬದ ಮಾರನೆಯ ದಿನದಂದು ಆಸ್ಕರ್ ವಿಜೇತ ನಟಿಯಾದ ಜೋಲಿ ಭೇಟಿ ನೀಡಿದ್ದಾರೆ. ಎಲ್ಲೂ ಇಲ್ಲದಂತಹ ಬರ್ಬರವಾದ ಕ್ರೌರ್ಯವನ್ನು ಅನುಭವಿಸಿರುವ ತಮ್ಮ ಹಿಂದಿನ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಹೆಣಗಾಡುತ್ತಿರುವುದನ್ನು ಕಂಡಾಗ ತೀವ್ರ ಕಳವಳವಾಗುತ್ತದೆಯೆಂದು 43 ವರ್ಷ ವಯಸ್ಸಿನ ಜೋಲಿ ಹೇಳಿರುವುದಾಗಿ ಯುಎನ್‌ಎಚ್‌ಸಿಆರ್‌ನ ವರದಿ ತಿಳಿಸಿದೆ.

   ಯುಎನ್‌ಸಿಎಚ್‌ಆರ್ ಜೊತೆಗಿನ ಒಡನಾಟದಲ್ಲಿ , ನಾನು ಈವರೆಗೆ ಕಂಡ ಅತ್ಯಂತ ಘೋರವಾದ ವಿನಾಶ ಇದಾಗಿದೆ. ಇಲ್ಲಿನ ಜನತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ , ಅವರು ಅನುಭವಿಸುತ್ತಿರುವ ಯಾತನೆ ಹಾಗೂ ನಷ್ಟವು ಊಹಿಸಲೂ ಅಸಾಧ್ಯವಾದುದಾಗಿದೆ. ಅತ್ಯಂತ ಅಲ್ಪ ನೆರವಿನೊಂದಿಗೆ ಅವರು ಬರಿಗೈಯಿಂದ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆ್ಯಂಜೆಲಿನಾ ಹೇಳಿರುವ ವೀಡಿಯೋವನ್ನು ಯುಎನ್‌ಸಿಎಚ್‌ಆರ್ ಪ್ರಸಾರ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News