ಸಚಿವ ಸ್ಥಾನದಿಂದ ಸತೀಶ್ ಜಾರಕಿ ಕೈಬಿಟ್ಟಿರುವುದಕ್ಕೆ ಖಂಡನೆ
ಮಂಗಳೂರು, ಜೂ.17: ರಾಜ್ಯದ ಶೋಷಿತ ಜನವರ್ಗದ ನೇತಾರ ಎಐಸಿಸಿಯ ಕಾರ್ಯದರ್ಶಿ ಸತೀಶ್ ಜಾರಕಿ ಹೋಳಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವ ಮೂಲಕ ಮೈತ್ರಿ ಸರಕಾರದ ತಪ್ಪು ನಿರ್ಧಾರವನ್ನು ಖಂಡಿಸಿ ಜೂನ್ 19ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಎಚ್ಚರಿಕೆ ಸಮಾವೇಶವನ್ನು ಹಮ್ಮಿಕೊಂಡಿದೆ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೇಡ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಚಿವ ಸಂಪುಟದಲ್ಲಿ 10 ಮಂದಿ ಒಕ್ಕಲಿಗರು ಇದ್ದು ದಲಿತರು ಅಲ್ಪ ಸಂಖ್ಯಾತರನ್ನು ಕಡೆಗಣಿಸಲಾಗಿದೆ.ಜಾತ್ಯತೀತ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ. ಹಾಸನ ಜಿಲ್ಲೆಯ ಮೀಸಲು ಕ್ಷೇತ್ರದಿಂದ 6 ಬಾರಿ ಗೆದ್ದಿರುವ ಹೆಚ್.ಕೆ.ಕುಮಾರಸ್ವಾಮಿಯವರಿಗೆ ಸಚಿವ ಸ್ಥಾನ ನೀಡದೆ ಹಗರಣದ ಆರೋಪ ಹೊತ್ತಿರುವ ಜಿ.ಟಿ.ದೇವೇಗೌಡರಿಗೆ ಸಚಿವ ಸ್ತಾನ ನೀಡಲಾಗಿದೆ.
ಈ ರೀತಿಯ ತಪ್ಪು ನಡೆಗಳನ್ನು ತಕ್ಷಣ ಸರಿಪಡಿಸಿಕೊಳ್ಳಬೇಕೆಂದು ಮಾನವ ಬಂಧುತ್ವ ವೇದಿಕೆ ಎಚ್ಚರಿಕೆ ನೀಡಲು ಸಮಾವೇಶ ಹಮ್ಮಿಕೊಂಡಿರುವುದಾಗಿ ವಿಲ್ಫ್ರೇಡ್ ಡಿ ಸೋಜ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ರಾಜೇಶ್ ದೇವಾಡಿಗ, ನಾರಾಯಣ ಕಿಲಂಗೋಡಿ, ಸುದಾನಂದ ಸುವರ್ಣ, ಚೆನ್ನಕೇಶವ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.