ಡಾ.ಬಿ.ಜಗದೀಶ್ ಶೆಟ್ಟರಿಗೆ ಪೊಳಲಿ-ಎಸ್.ಆರ್.ಹೆಗ್ಡೆ ಪ್ರಶಸ್ತಿ

Update: 2018-06-18 14:30 GMT

 ಉಡುಪಿ, ಜೂ.18: ನಾಡಿನ ಪ್ರಮುಖ ಇತಿಹಾಸಕಾರರಲ್ಲೊಬ್ಬರಾದ ಡಾ. ಬಿ. ಜಗದೀಶ್ ಶೆಟ್ಟಿ ಇವರನ್ನು 2018ನೇ ಸಾಲಿನ ಪೊಳಲಿ ಶೀನಪ್ಪಹೆಗ್ಡೆ ಹಾಗೂ ಎಸ್.ಆರ್.ಹೆಗ್ಡೆ ಹೆಸರಿನಲ್ಲಿ ಜಂಟಿಯಾಗಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು, ಸ್ವಾತಂತ್ರ ಹೋರಾಟಗಾರ ಹಾಗೂ ತುಳು ಸಾಹಿತಿ ಪೊಳಲಿ ಶೀನಪ್ಪಹೆಗ್ಡೆ ಮತ್ತು ಲೇಖಕ ಎಸ್.ಆರ್.ಹೆಗ್ಡೆ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡುತಿದ್ದು, ಪ್ರಶಸ್ತಿಯು 20,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳ ಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.30ರ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಜಗದೀಶ್ ಶೆಟ್ಟಿ ಇವರು ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆ, ಕ್ಷೇತ್ರಕಾರ್ಯ, ಗ್ರಂಥ ರಚನೆ ಮಂತಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಶಾಸನ ಶಾಸ್ತ್ರದಲ್ಲಿ ಪರಿಣತರು. 1983ರಿಂದ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥ ರಾಗಿ ಪ್ರಸ್ತುತ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ.ಶೆಟ್ಟಿ ವಿವಿಧ ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ‘ಬಾರಕೂರು ಪರಿಸರದ ಶಾಸನಗಳು’ ಎಂಬ ಪುಸ್ತಕ ಮಂಗಳೂರು ವಿ.ವಿ ಪ್ರಸಾರಾಂಗದಿಂದ ಪ್ರಕಟವಾಗಿದೆ. ‘ತುಳುನಾಡಿನ ರಾಜಕೀಯ ಚರಿತ್ರೆ’, ‘ತುಳು ಕರ್ನಾಟಕದ ಅರಸು ಮನೆತನಗಳು’, ‘ಕರಾವಳಿ ಕರ್ನಾಟಕದ ಜೈನ ಅರಸು ಮನೆತನಗಳು’ ಹಂಪಿ ವಿವಿ ಪ್ರಕಟಿತ ಪುಸ್ತಕಗಳಲ್ಲಿ ಇವರ ಸಂಶೋಧನಾತ್ಮಕ ಅಧ್ಯಾಯಗಳು ಪ್ರಕಟವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News