×
Ad

ರಾ.ಹೆ. ಅಸಮರ್ಪಕ ಕಾಮಗಾರಿ: ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

Update: 2018-06-18 20:15 IST

ಉಡುಪಿ, ಜೂ.18: ಟೋಲ್ ಸಂಗ್ರಹಿಸುತ್ತಿರುವ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಸಮರ್ಪಕ ಕಾಮಗಾರಿಯಿಂದ ಅಪಘಾತಗಳು ಹೆಚ್ಚುತ್ತಿದ್ದು, ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಶನ್ ಹಾಗೂ ಜೆಡಿಎಸ್ ಉಡುಪಿ ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿ ತೋಡಿ ರಸ್ತೆಯನ್ನು ಅಗಲ ಮಾಡುತ್ತಿದ್ದಾರೆ. ತಿರುವುಗಳು, ಸರ್ವಿಸ್ ರಸ್ತೆ, ಚರಂಡಿಗೆ ಸಂಬಂಧಿಸಿ ಯಾವುದೇ ಸುರಕ್ಷತೆ ಇಲ್ಲದೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರತಿದಿನ ಹಲವು ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಘಟನೆ ದೂರಿದೆ.

ಶಿರೂರಿನಲ್ಲಿ ನಿರ್ಮಾಣ ಆಗುತ್ತಿರುವ ಟೋಲ್‌ಗೇಟ್‌ನಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಟೋಲ್ ಶುಲ್ಕವನ್ನು ಸಂಗ್ರಹಿಸಿದಲ್ಲಿ ಲಾರಿ ಮಾಲಕರ ಅಸೋಸಿಯೇನ್ ಹಾಗೂ ಎಲ್ಲ ವಾಹನಗಳ ಚಾಲಕರು ಮಾಲಕರು ಹಾಗೂ ಸಾರ್ವಜನಿಕರು ಸೇರಿ ಮುಷ್ಕರ ನಡೆಸಲಾಗುವುದು ಎಂು ಅಸೋಸಿಯೇಶನ್ ಎಚ್ಚರಿಕೆ ನೀಡಿದೆ.

ಜಿಲ್ಲಾಧಿಕಾರಿಗಳು ಕೂಡಲೇ ಹೆದ್ದಾರಿ ಕಾಮಗಾರಿಯ ನಡೆಸುವ ಕಂಪೆನಿ, ಮತ್ತು ಇಲಾಖೆ ಅಧಿಕಾರಿಗಳ ಹಾಗೂ ಪೊಲೀಸರ ಸಮ್ಮುಖದಲ್ಲಿ ಸಾರ್ವ ಜನಿಕರು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷದ ಮುಖಂಡರ ಸಭೆ ಯನ್ನು ಕರೆದು ಈ ಕುರಿತು ನಿರ್ಣಯ ತೆಗೆದುಕೊಳ್ಳಬೇಕು. ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಾಗುವುದು ಎಂದು ಜೆಡಿಎಸ್ ಮನವಿಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಲಾರಿ ಮಾಲಕರ ಸಂಘದ ಜಂಟಿ ಕಾರ್ಯದರ್ಶಿ ಹಾಗೂ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ್ ಇಬ್ರಾಹಿಂ, ಮುಖಂಡರಾದ ಹುಸೈನ್ ಹೈಕಾಡಿ, ಇಕ್ಬಾಲ್ ಅತ್ರಾಡಿ, ಹಾರಿಸ್, ರಫೀಕ್ ಕೋಟೇಶ್ವರ, ಇರ್ಫಾನ್ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News