×
Ad

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ

Update: 2018-06-18 20:29 IST

ಮಂಗಳೂರು, ಜೂ.18: ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿ ಬೆಳೆ ವಿಮೆ ಕಾರ್ಯಕ್ರಮವನ್ನು ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮದಲ್ಲಿ 2018 ಮುಂಗಾರು ಹಂಗಾಮಿಗೆ ಅನ್ವಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಈ ಯೋಜನೆಯು ಕೇಂದ್ರ ಸರಕಾರ ನೀಡಿರುವ ಮಾನದಂಡಗಳ ಆಧಾರದಲ್ಲಿ ತೋಟಗಾರಿಕೆ ರೈತರಿಗೆ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಉಂಟಾದಲ್ಲಿ ವಿಮಾ ನಷ್ಟ ಪರಿಹಾರವನ್ನು ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ಈ ಯೋಜನೆಯನ್ನು ಮುಂಗಾರು ಹಂಗಾಮಿಗೆ ದ.ಕ. ಜಿಲ್ಲೆಯ ಎಲ್ಲಾ ನಗರ ಸ್ಥಳೀಯಾಡಳಿತ ಸಂಸ್ಥೆ ಹಾಗೂ 231 ಗ್ರಾಪಂಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ 2018ನೇ ಮುಂಗಾರು ಹಂಗಾಮಿಗೆ ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಅಧಿಸೂಚಿಸಿ ಆದೇಶ ಹೊರಡಿಸಲಾಗಿದೆ. 2018ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ವಿಮಾ ಕಂತು ಪಾವತಿಸಲು ಜೂ.30 ಅಂತಿಮ ದಿನವಾಗಿರುತ್ತದೆ. ಈ ಯೋಜನೆಯು ಅಧಿಸೂಚಿತ ಬೆಳೆಗಳಿಗೆ ಬ್ಯಾಂಕ್‌ಗಳಿಂದ (ರಾಷ್ಟ್ರೀಕೃತ ಬ್ಯಾಂಕ್/ ಖಾಸಗಿ/ ಸಹಕಾರಿ ಬ್ಯಾಂಕ್‌ಗಳು) ಬೆಳೆ ಸಾಲ ಪಡೆದಿರುವ ರೈತರಿಗೆ ಕಡ್ಡಾಯವಾಗಿರುತ್ತದೆ ಹಾಗೂ ಬೆಳೆ ಸಾಲ ಹೊಂದಿಲ್ಲದ ರೈತರಿಗೆ ಐಚ್ಚಿಕವಾಗಿರುತ್ತದೆ.

ಈ ಯೋಜನೆಯಡಿ ತೋಟಗಾರಿಕೆ ರೈತರು ಅಧಿಸೂಚಿತ ಬೆಳೆಗಳಿಗೆ ಸಂಬಂಧಿಸಿ ಸಾಲ ಪಡೆದುಕೊಂಡಿರುವ ಬ್ಯಾಂಕ್‌ಗಳ ಮೂಲಕ ಹಾಗೂ ಸಾಲ ಪಡೆಯದಿರುವ ರೈತರು ಉಳಿತಾಯ ಖಾತೆಯನ್ನು ಹೊಂದಿರುವ ಬ್ಯಾಂಕ್‌ಗಳ ಮೂಲಕ ವಿಮಾ ಕಂತುಗಳನ್ನು ಪಾವತಿಸಿ ಯೋಜನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಅಧಿಸೂಚಿತ ತೋಟಗಾರಿಕೆ ಬೆಳೆಗಳನ್ನು 2018ರ ಮುಂಗಾರು ಹಂಗಾಮಿಗೆ ಸಂಬಂಧಿಸಿ ಗ್ರಾಪಂ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಸರಕಾರ ಸೂಚಿಸಿದೆ. ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ/ ಗ್ರಾಮೀಣ ಸಹಕಾರಿ ಬ್ಯಾಂಕ್/ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಥವಾ ಕೃಷಿ ಅಧಿಕಾರಿಗಳು/ತಾಲೂಕು ಮಟ್ಟದ ಹಿರಿಯ ಸಹಾಯಕ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು/ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು.

ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಮಂಗಳೂರು 0824-2423628, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಮಂಗಳೂರು 0824-2423615, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಪುತ್ತೂರು 08251-230905, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸುಳ್ಯ 08257-232020, ಸಹಾಯಕ ತೋಟಗಾರಿಕ ತೋಟಗಾರಿಕೆ ಕಚೇರಿ ಬಂಟ್ವಾಳ 08255-234102, ಸಹಾಯಕ ತೋಟಗಾರಿಕ ತೋಟಗಾರಿಕೆ ಕಚೇರಿ ಬೆಳ್ತಂಗಡಿ 08256-232148 ಅವರನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News