ವಿವಾಹಿತ ವ್ಯಕ್ತಿಗೆ ಸಂತ ಪದವಿ ನೀಡಲು ಸಾಧ್ಯವಿಲ್ಲ: ಅಖಾಡ ಪರಿಷದ್

Update: 2018-06-18 16:28 GMT

ಇಂದೋರ್,ಜೂ.18: ಗೃಹಸ್ಥ ಸಂತ ಎಂಬ ಪರಿಕಲ್ಪನೆಯನ್ನು ವಿರೋಧಿಸಿರುವ ಅಖಿಲ ಭಾರತ ಅಖಾಡ ಪರಿಷದ್ ಅಥವಾ ಅಬಪ್ ವಿವಾಹಿತ ವ್ಯಕ್ತಿಗೆ ಸಂತ ಪದವಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಬಪ್ ಹಿಂದೂ ಸಂತರ ಮತ್ತು ಸ್ವಾಮೀಜಿಗಳ ಪ್ರಮುಖ 13 ಅಖಾಡ ಅಥವಾ ಧಾರ್ಮಿಕ ಸಂಸ್ಥೆಯಾಗಿದೆ. ಜೂನ್ 12ರಂದು ಆಧ್ಯಾತ್ಮಿಕ ಗುರು ಭೈಯ್ಯೂಜಿ ಮಹಾರಾಜ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅಬಪ್ ಈ ಹೇಳಿಕೆಯನ್ನು ನೀಡಿದೆ.

ಭೈಯ್ಯೂಜಿ ಮಹಾರಾಜ್‌ರನ್ನು ಅವರ ಅನುಯಾಯಿಗಳು ರಾಷ್ಟ್ರಸಂತ ಎಂದು ಕರೆಯುತ್ತಿದ್ದರು. ಅವರು ಕೌಟುಂಬಿಕ ವಿವಾದದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಅಖಾಡ ಪರಿಷದ್‌ನ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ, ಗೃಹಸ್ಥ ವ್ಯಕ್ತಿಗಳನ್ನು ಐವತ್ತರ ಹರೆಯದವರೆಗೆ ಸಂತ ಎಂದು ಪರಿಗಣಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಭೈಯ್ಯೂಜಿ ಮಹಾರಾಜ್ ಓರ್ವ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರ ಸಾವಿನ ಬಗ್ಗೆ ಮನಗೆ ದುಃಖವಿದೆ. ಆದರೆ ಓರ್ವ ವಿವಾಹಿತ ವ್ಯಕ್ತಿಯನ್ನು ಧಾರ್ಮಿಕ ನೆಲೆಯಲ್ಲಿ ಸಂತ ಎಂದು ಕರೆಯುವುದು ಸೂಕ್ತವಲ್ಲ ಎಂದು ನಾವು ನಂಬಿದ್ದೇವೆ. ಗೃಹಸ್ಥ ಸಂತ ಎಂಬ ಪರಿಕಲ್ಪನೆಯನ್ನು ನಾವು ಒಪ್ಪುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರದ ವ್ಯಕ್ತಿಗಳು ತಾವು ಸಂತರಾಗಬೇಕೋ ಅಥವಾ ಕುಟುಂಬಸ್ಥರಾಗಬೇಕೋ ಎಂಬುದನ್ನು ತೀರ್ಮಾನಿಸಬೇಕು. ಅವರು ಎರಡು ದೋಣಿಯಲ್ಲಿ ಪ್ರಯಾಣ ಮಾಡುವಂತಿಲ್ಲ. ಹಾಗೆ ಮಾಡಿದರೆ ಕೌಟುಂಬಿಕ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಎಂದು ಗಿರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News