×
Ad

ಜಾರ್ಜ್ ಫೆರ್ನಾಂಡಿಸ್ ಕುರಿತು ಸಿನೆಮಾ ನಿರ್ಮಿಸಲು ಶಿವಸೇನಾ ನಾಯಕ ಚಿಂತನೆ!

Update: 2018-06-18 22:01 IST

ಮುಂಬೈ, ಜೂ.18: ಬಾಲಿವುಡ್‌ನಲ್ಲೀಗ ಬಯೋಪಿಕ್ ಅಂದರೆ ಜೀವನಚರಿತ್ರೆ ಆಧಾರಿತ ಸಿನೆಮಾಗಳನ್ನು ನಿರ್ಮಿಸುವುದು ಟ್ರೆಂಡ್ ಆಗಿದೆ. ಇದೀಗ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಜಾರ್ಜ್ ಫೆರ್ನಾಂಡಿಸ್ ಕುರಿತ ಸಿನೆಮಾವನ್ನು ನಿರ್ಮಿಸಲು ಯೋಜನೆ ಸಿದ್ಧವಾಗುತ್ತಿದೆ. ಆಸಕ್ತಿದಾಯಕ ವಿಷಯವೆಂದರೆ ಈ ಸಿನೆಮಾವನ್ನು 1960ರ ದಶಕದಲ್ಲಿ ಜಾರ್ಜ್ ಫೆರ್ನಾಂಡಿಸ್ ನೇತೃತ್ವದ ವ್ಯಾಪಾರ ಸಂಘಟನೆಯ ವಿರುದ್ಧ ಹಲವು ಬಾರಿ ಹೋರಾಟ ನಡೆಸಿದ್ದ ಶಿವಸೇನೆಯ ಸಂಜಯ್ ರಾವತ್ ನಿರ್ಮಿಸಲಿದ್ದಾರೆ. ಸದ್ಯ ಕತೆ ಸಿದ್ದವಾಗಿದ್ದು ಅದನ್ನು ಹಿಂದಿ ಮತ್ತು ಮರಾಠಿಯಲ್ಲಿ ತಯಾರಿಸಲು ಸಮರ್ಥವಾಗಿರುವ ತಂಡದ ಹುಟುಕಾಟದಲ್ಲಿ ರಾವತ್ ಇದ್ದಾರೆ.

ಮಂಗಳೂರಿನ ಬಿಜೈಯಲ್ಲಿ ಜನಿಸಿದ ಜಾರ್ಜ್ ಫೆರ್ನಾಂಡಿಸ್ ವ್ಯಾಪಾರ ಸಂಘಟನೆಯ ಮುಖಂಡನಾಗಿ ಮುಂಬೈಯಲ್ಲಿ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಹಲವು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡಬಲ್ಲ ಫೆರ್ನಾಂಡಿಸ್ ಮರಾಠಿ ಭಾಷೆ ಮಾತನಾಡುವಲ್ಲೂ ಎತ್ತಿದಕೈ.

ಈ ಸಿನೆಮಾವು ಐವತ್ತರ ದಶಕದ ಮಧ್ಯಭಾಗದಿಂದ ತುರ್ತು ಪರಿಸ್ಥಿತಿಯ ಸಮಯದ ವರೆಗಿನ ಕತೆಯನ್ನು ಹೊಂದಲಿದೆ. 1967ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಕರೆಯಲಾಗುತ್ತಿದ್ದ ಮುಂಬೈಯಲ್ಲಿ ಎಸ್.ಕೆ ಪಾಟೀಲ್‌ರನ್ನು ಸೋಲಿಸುವ ಮೂಲಕ ಜಾರ್ಜ್ ಫೆರ್ನಾಂಡಿಸ್ ಜೈಂಟ್ ಕಿಲ್ಲರ್ ಎಂದೇ ಪ್ರಸಿದ್ಧಿ ಪಡೆದರು. ಶಿವಸೇನೆಯ ರಾಜ್ಯಸಭಾ ಸದಸ್ಯ ಶಿವಸೇನೆಯ ಸಂಸ್ಥಾಪಕ ಬಾಳ್ ಠಾಕ್ರೆ ಕುರಿತ ಸಿನೆಮಾವನ್ನೂ ನಿರ್ಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News