ಎಲ್ಲ ಧರ್ಮಗಳ ಸಾರ ಮಾನವ ಕಲ್ಯಾಣಕ್ಕೆ ಅವಶ್ಯಕ: ಸುರೇಂದ್ರ ಅಡಿಗ
ಉಡುಪಿ, ಜೂ.18: ಪ್ರತಿಯೊಂದು ಧರ್ಮದಲ್ಲಿರುವ ಸಾರ ಮಾನವ ಕಲ್ಯಾಣಕ್ಕೆ ಅತಿ ಅವಶ್ಯಕವಾಗಿದೆ. ಇದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಉಡುಪಿ ಶೋಕಮಾತಾ ಇಗರ್ಜಿ, ಸೌಹಾರ್ದ ಸಮಿತಿ, ಕೆಥೊಲಿಕ್ ಸಭಾ ಉಡುಪಿ ಘಟಕ ಹಾಗೂ ಲಯನ್ಸ್ ಕ್ಲಬ್ ಉಡುಪಿ ಸಂಗಮ ವತಿಯಿಂದ ಇಗರ್ಜಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಸರ್ವ ಧರ್ಮ ಈದ್ ಆಚರಣೆಯಲ್ಲಿ ಅವರು ಮಾತನಾಡುತಿದ್ದರು.
ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪುರ ರೆಹಮಾನಿಯ ಜುಮ್ಮಾ ಮಸೀದಿಯ ಧರ್ಮಗುರು ವೌಲಾನಾ ಅಬ್ದುಲ್ ಅಝೀಝ್ ಮಿಸ್ಬಾಯಿ ಮಾತನಾಡಿ, ನಮ್ಮ ಆರಾಧನೆಯಲ್ಲಿ ವ್ಯತ್ಯಾಸಗಳಿದ್ದರೂ ಎಲ್ಲರಿಗೂ ದೇವರು ಒಬ್ಬನೆ. ಸೌಹಾರ್ದತೆಯಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಆದುದರಿಂದ ನಾವು ಮಾನವೀಯತೆ ಧರ್ಮವನ್ನು ನೆಲೆಗೊಳಿಸಿ ಬದುಕಬೇಕು ಎಂದರು.
ಅಧ್ಯಕ್ಷತೆಯನ್ನು ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅತಿ ವಂ.ವಲೇರಿಯನ್ ಮೆಂಡೊನ್ಸಾ ವಹಿಸಿದ್ದರು. ಕೊರಂಗ್ರಪಾಡಿಯ ಕ್ರಿಸ್ತಜ್ಯೋತಿ ಚರ್ಚ್‌ನ ಸಭಾಪಾಲಕ ಅಕ್ಷ್ ಅಮ್ಮಣ್ಣ ಶುಭಾಶಂಸನೆಗೈದರು.
ಸೌಹಾರ್ದ ಸಮಿತಿಯ ಸಂಚಾಲಕ ಮೈಕಲ್ ಡಿಸೋಜ ಸ್ವಾಗತಿಸಿದರು. ಕೆಥೋಲಿಕ್ ಸಭಾ ಉಡುಪಿ ಘಟಕದ ಅಧ್ಯಕ್ಷ ಮ್ಯಾಕ್ಸಿಮ್ ಡಿಸೋಜ ವಂದಿಸಿ ದರು. ಅಲ್ಫೋನ್ಸ್ ಡಿಕೋಸ್ತ ಕಾರ್ಯಕ್ರಮ ನಿರೂಪಿಸಿದರು.