ಮಾಹೆಯಲ್ಲಿ ಯೋಗ ದಿನಾಚರಣೆ
ಉಡುಪಿ, ಜೂ.18: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ), ತನ್ನ ಯೋಗ ವಿಭಾಗದ ಮೂಲಕ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಿದೆ.
ಯೋಗ ವಿಭಾಗ ಕಳೆದ ಎರಡು ತಿಂಗಳಿನಿಂದ ಯೋಗ ಸ್ಪರ್ಧೆಯೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತಿದ್ದು, ಇದರ ಸಮಾರೋಪ ಜೂ.21ರಂದು ನಡೆಯಲಿದೆ. ಯೋಗ ಸ್ಪರ್ಧೆಯೊಂದಿಗೆ, ಮಕ್ಕಳಿಗೆ ಯೋಗ ಶಿಬಿರ, ಪ್ರಬಂಧ ಸ್ಪರ್ಧೆ, ಆಸನ ಸ್ಪರ್ಧೆಗಳನ್ನು ಏರ್ಪಡಿಸಿದೆ.
ಇವುಗಳೊಂದಿಗೆ ದಕ್ಷಿಣ ಕೆರೋಲಿನಾ ಮೆಡಿಕಲ್ ವಿವಿಯ ಹಾಲಿಂಗ್ಸ್ ಕ್ಯಾನ್ಸರ್ ಸೆಂಟರ್‌ನ ಪ್ರೊಪೆಸರ್ ಡಾ.ಸುಂದರ ಬಾಲಸುಬ್ರಹ್ಮಣ್ಯಂ ಅವರು ‘ಪುರಾತನ ಮಂತ್ರಗಳ ಪ್ರೊಟೀನಾಗಿ ಪರಿವರ್ತನೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮಾಹೆಯ ಸಿಬ್ಬಂದಿಗಳಿಗೆ, ಡೆಂಟಲ್ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಯೋಗ ತರಗತಿಯನ್ನು ಆಯೋಜಿಸಲಾಗಿತ್ತು.
ಜೂ.21ರಂದು ಬೆಳಗ್ಗೆ 8 ರಿಂದ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಇವರು ವಿದ್ಯಾರ್ಥಿಗಳು ಹಾಗೂ ಮಾಹೆ ಸಿಬ್ಬಂದಿಗಳಿಗೆ ಯೋಗಾಭ್ಯಾಸವನ್ನು ನಡೆಸಲಿದ್ದಾರೆ. 8:45ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಡಾ.ಎಚ್.ಎಸ್.ಬಲ್ಲಾಳ್, ಡಾ.ಪೂರ್ಣಿಮಾ ಬಾಲಿಗಾ, ಡಾ.ನಾರಾಯಣ ಸಭಾಹಿತ್, ಡಾ.ಅವಿನಾಶ್ ಶೆಟ್ಟಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.