ತರಬೇತಿಯಿಂ ಯಶಸ್ಸು ಸಾಧ್ಯ: ಭಾಸ್ಕರ ಹಂದೆ
ಮಣಿಪಾಲ, ಜೂ.18: ಸತತ ಪರಿಶ್ರಮ ಹಾಗೂ ತರಬೇತಿಯಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ವಲಯದ ಮಹಾಪ್ರಬಂಧಕರಾದ ಭಾಸ್ಕರ ಹಂದೆ ಹೇಳಿದ್ದಾರೆ.
ಶಿವಳ್ಳಿಯ ಭಾರತೀಯ ವಿಕಾಸ್ ಟ್ರಸ್ಟ್‌ನಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಮಹಿಳೆಯರಿಗೆ ಒಂದು ತಿಂಗಳ ಹೊಲಿಗೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇಲ್ಲಿ ತರಬೇತಿ ಪಡೆದ ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳುವುದಾದಲ್ಲಿ ಸಿಂಡಿಕೇಟ್ ಬ್ಯಾಂಕಿನ ಮೂಲಕ ಕೇಂದ್ರ, ರಾಜ್ಯ ಸರಕಾರಗಳಿಂದ ಪ್ರಾಯೋಜಿ ಸಲ್ಪಟ್ಟ ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೆಲ್ಕೋ ಫೌಂಡೇಶನ್ ಮುಖ್ಯಸ್ಥ ಹಾಗೂ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಡಾ.ಹರೀಶ್ ಹಂದೆ ಮಾತನಾಡಿ,ಶಿಬಿರಾರ್ಥಿ ಗಳು ತರಬೇತಿ ಅವಧಿಯಲ್ಲಿ ಕೌಶಲ್ಯ ಪಡೆಯುವುದರ ಜೊತೆಗೆ ಮುಂದೆ ಸ್ವ ಉದ್ಯೋಗ ನಡೆಸುವಾಗ ಸೌರಶಕ್ತಿ ಬಳಸುವ ಬಗ್ಗೆ ಚಿಂತನೆ ನಡೆಸಬೇಕು. ತಮ್ಮ ಸಮಸ್ಯೆ, ಸವಾಲುಗಳಿಗೆ ಪರಿಹಾರ, ನೆರವು ಒದಗಿಸಲು ಸೆಲ್ಕೋ ಸಿದ್ಧವಿದೆ ಎಂದರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿವಿಟಿ ಆಡಳಿತಾಧಿಕಾರಿ ಐ.ಜಿ. ಕಿಣಿ ವಂದಿಸಿದರು. ಬಿವಿಟಿ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮಿೀ ಬಾಯಿ ಕಾರ್ಯಕ್ರಮ ನಿರ್ವಹಿಸಿದರು.
ಸೆಲ್ಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನ ಹೆಗಡೆ, ಬಿವಿಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ, ದ.ಕ.ಜಿಲ್ಲೆಗಳ 31ಕ್ಕೂ ಅಧಿಕ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.