ಭಾರತೀಯರು ಆರ್ಥಿಕ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚು: ವರದಿ

Update: 2018-06-18 16:43 GMT

ಮುಂಬೈ, ಜೂ.18: ಭಾರತೀಯರು ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯವಾಗುತ್ತಿರುವಂತೆಯೇ ವಂಚನೆಗೊಳಗಾಗುವ ಅಪಾಯವೂ ಹೆಚ್ಚುತ್ತಿದೆ. ಭಾರತದಲ್ಲಿ ನಾಲ್ಕರಲ್ಲಿ ಓರ್ವ ವ್ಯಕ್ತಿ ಆನ್‌ಲೈನ್ ಹಣಕಾಸು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಗ್ಲೋಬಲ್ ಫೈನಾನ್ಶಿಯಲ್ ಇನ್‌ಫಾರ್ಮೇಶನ್ ಕಂಪೆನಿ ಪ್ರಕಟಿಸಿದ ವರದಿಯ ಪ್ರಕಾರ ಶೇ.24ರಷ್ಟು ಭಾರತೀಯರು ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುವ ಸಂದರ್ಭ ನೇರವಾಗಿ ವಂಚನೆಗೊಳಗಾದರೆ, ಟೆಲಿಕಾಂ, ಬ್ಯಾಂಕಿಂಗ್ ಹಾಗೂ ಚಿಲ್ಲರೆ ಮಾರಾಟ ಕ್ಷೇತ್ರಗಳಲ್ಲಿ ಅತೀ ಹೆಚ್ಚು ಬಲಿಪಶುಗಳಿದ್ದಾರೆ ಎಂದು ವರದಿ ತಿಳಿಸಿದೆ. ಭಾರತೀಯರು ಬ್ಯಾಂಕ್‌ಗಳ ಜೊತೆ ಮಾಹಿತಿ ಹಂಚಿಕೊಳ್ಳುವಾಗ ಹಿತಾನುಭವ ಹೊಂದಿರುತ್ತಾರೆ (ಶೇ.50ರಷ್ಟು) ಮತ್ತು ಬ್ರಾಂಡೆಡ್ ಉತ್ಪನ್ನಗಳ ತಯಾರಕರ ಜೊತೆ ಮಾಹಿತಿ ಹಂಚಿಕೊಳ್ಳುವಾಗ ಆತಂಕಿತರಾಗಿರುತ್ತಾರೆ (ಶೇ.30ರಷ್ಟು). ಶೇ.65ರಷ್ಟು ಭಾರತೀಯರು ಮೊಬೈಲ್ ಪಾವತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೇ.6ರಷ್ಟು ಭಾರತೀಯರು ಸೇವೆಗಳ ಪೂರೈಕೆದಾರರೊಂದಿಗೆ ಹಂಚಿಕೊಂಡಿರುವ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಸಂರಕ್ಷಿಸಲು ಬಯಸುತ್ತಾರೆ (ಜಪಾನ್‌ನಲ್ಲಿ ಈ ಪ್ರಮಾಣ ಶೇ.8ರಷ್ಟಿದೆ). ಶೇ.51ರಷ್ಟು ಭಾರತೀಯರು ವಿವಿಧ ಸೇವೆಗಳನ್ನು ಪಡೆಯಲು ತಮ್ಮ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲು ಸಿದ್ಧರಿದ್ದಾರೆ.

ಏಶಿಯಾ-ಪೆಸಿಫಿಕ್ ವಲಯದಲ್ಲಿ ಡಿಜಿಟಲ್ ಮಾಧ್ಯಮವನ್ನು ಬಳಸುವವರಲ್ಲಿ ಭಾರತೀಯರಿಗೆ ಅಗ್ರ ಸ್ಥಾನ ಸಲ್ಲುತ್ತದೆ. ಜನಸಂಖ್ಯೆಗೆ ಸಂಬಂಧಿಸಿ ತಪ್ಪಾದ ಮಾಹಿತಿ ಹಂಚಿಕೆ ಮಾಡುವ ರಾಷ್ಟ್ರಗಳಲ್ಲಿ ಭಾರತ ಏಶಿಯಾ-ಪೆಸಿಫಿಕ್ ವಲಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News