ದನದ ವ್ಯಾಪಾರಿ ಹುಸೈನಬ್ಬ ಸಾವಿನ ಪ್ರಕರಣ: ಜಾಮೀನು ಕೋರಿ ದೀಪಕ್ ಹೆಗ್ಡೆ ನ್ಯಾಯಾಲಯಕ್ಕೆ ಅರ್ಜಿ

Update: 2018-06-19 15:47 GMT

ಉಡುಪಿ, ಜೂ. 19: ಪೆರ್ಡೂರು ಗ್ರಾಮದ ಶೇನರಬೆಟ್ಟು ಬಳಿ ಮೇ 30 ರಂದು ಸಾವನ್ನಪ್ಪಿದ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ (62) ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ದೀಪಕ್ ಹೆಗ್ಡೆ ಪರವಾಗಿ ಜಾಮೀನಿಗಾಗಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.

ಆರೋಪಿ ಪರ ಹಿರಿಯ ವಕೀಲ ಅರುಣ್ ಬಂಗೇರ ಜಾಮೀನಿಗಾಗಿ ನ್ಯಾಯಾಲಯಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಆಕ್ಷೇಷಣೆ ಸಲ್ಲಿಕೆಗೆ ಜೂ. 20 ರವರೆಗೆ ಅವಕಾಶ ನೀಡಿದೆ.

ಪ್ರಕರಣದ 15ನೇ ಆರೋಪಿಯಾಗಿರುವ ದೀಪಕ್‍ನ ಮೇಲೆ ದನ ಮಾರಾಟ ಹಾಗೂ ಕೊಲೆ ಪ್ರಕರಣದ ಆರೋಪವೂ ದಾಖಲಾಗಿದೆ. ಇತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರಿಪಡಿಸಿ, ಮಂಗಳೂರು ಕಾರಾಗೃಹದಲ್ಲಿ ಇಟ್ಟಿದ್ದಾರೆ. ಈ ಪ್ರಕರಣದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಬಂಧಿತ ಆರೋಪಿಗಳ ಪೈಕಿ ಹಿರಿಯಡ್ಕ ಠಾಣೆಯ ಎಸ್‍ಐ ಸಹಿತ 11 ಮಂದಿಯ ಪೈಕಿ 8 ಅರ್ಜಿಯನ್ನು ನ್ಯಾಯಾಲಯ ಸೋಮವಾರ ತಿರಸ್ಕೃತಗೊಳಿಸಿ ಆದೇಶ ನೀಡಿತ್ತು. ಈ ಪ್ರಕರಣದಲ್ಲಿ ದೀಪಕ್ ಹೆಗ್ಡೆ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸುತ್ತಿರುವ ಮೊದಲ ಮೊದಲ ಜಾಮೀನು ಅರ್ಜಿಯಾಗಿದೆ.

ಪ್ರಕರಣದಲ್ಲಿ ಬಂತರಾಗಿರುವ ಹೆಡ್‍ಕಾನ್‍ಸ್ಟೇಬಲ್ ಮೋಹನ್ ಕೊತ್ವಾಲ್, ಬಜರಂಗದಳ ಕಾರ್ಯಕರ್ತ ಪ್ರಸಾದ್ ಎಚ್. ಕೊಂಡಾಡಿ ಹಾಗೂ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ತುಕಾರಾಮ್‍ಗೆ ಸೋಮವಾರ ಜಾಮೀನು ಮಂಜೂರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News