ಭಟಕಳ ಅರ್ಬನ್ ಬ್ಯಾಂಕಿನಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ

Update: 2018-06-19 17:03 GMT

ಭಟ್ಕಳ, ಜೂ. 19: ಈಗಾಗಲೇ ಹತ್ತು ಹಲವು ಕಾರ್ಯಚಟುವಟಿಕೆಗಳಿಂದ ಮನೆ ಮಾತಾಗಿರುವ ಭಟಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವಿದ್ಯುತ್ ಸ್ವಾವಲಂಬಿಯಾಗುವುದರ ಮೂಲ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ.

ಬ್ಯಾಂಕಿನ ಕೇಂದ್ರ ಕಛೇರಿಯ ಆವರಣದಲ್ಲಿ ಅಳವಡಿಸಿದ ಸೌರ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ ಚೌಗುಲೆ, ಈ ಸೌರ ವಿದ್ಯುತ್ ಉತ್ಪಾದನಾ ಘಟಕವು 25 ಮೆಗಾ ವ್ಯಾಟ್ ಸಾಮರ್ಥ್ಯವನ್ನು ಹೊಂದಿದ್ದು, ನೆಟ್ ಮೀಟರ್ ತಾಂತ್ರಿಕತೆಯನ್ನು ಹೊಂದಿರುತ್ತದೆ. ಬ್ಯಾಂಕು ಈ ಸೌರ ವಿದ್ಯುತ್ ಘಟಕದಿಂದ ಉತ್ಪತ್ತಿಯಾದ ವಿದ್ಯುತ್‌ನ್ನು ತನ್ನ ಪ್ರತಿನಿತ್ಯದ ಚಟುವಟಿಕೆಗಳಿಗೆ ಉಪಯೋಗಿಸಿದ ನಂತರ ಹೆಚ್ಚಿಗೆ ಉಳಿದ ವಿದ್ಯುತ್‌ನ್ನು ಯುನಿಟ್ ಒಂದಕ್ಕೆ ರೂ.6/- ರಂತೆ ಹೆಸ್ಕಾಂ ಗ್ರಿಡ್‌ಗೆ ವರ್ಗಾವಣೆ ಮಾಡುವುದರ ಮೂಲಕ ವಿದ್ಯುತ್ ಗಳಿಕೆಯಲ್ಲಿ ಸ್ವಾವಲಂಬಿಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಬ್ಯಾಂಕಿನ ಕಟ್ಟಡದ ಮೇಲ್ಛಾವಣಿಯು ಅತೀ ಎತ್ತರದಲ್ಲಿದ್ದು, ವಿಶಾಲವಾಗಿರುವುದರಿಂದ ಅತೀ ಹೆಚ್ಚು ಯುನಿಟ್ ವಿದ್ಯುತ್ ಉತ್ಪಾದಿಸಲು ಅನುಕೂಲವಾಗಲಿದೆ ಎಂದೂ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಶೇಖ ಶಬ್ಬೀರ್ ಕಾದಿರ ಬಾಷಾ, ಆಡಳಿತ ಮಂಡಳಿಯ ನಿರ್ದೇಶಕರಾದ ಮಾಸ್ತಿ ಮೊಗೇರ್, ಅಬ್ದುಲ್ ಖಾಲಿದ್ ಸೌದಾಗರ್, ಶ್ರೀಧರ ನಾಯ್ಕ, ಇಮ್ತಿಯಾಜ್ ಜುಬಾಪು, ಜಗದೀಶ ಪೈ, ಜಾಫರ ಸಾಧಿಕ್ ಶಾಬಂದ್ರಿ ಹಾಗೂ ಬ್ಯಾಂಕಿನ ಪ್ರಧಾನ ಕಾರ್ಯನಿರ್ವಾಹಕ ಎಸ್.ಅಬ್ದುಲ ರಜಾಕ್, ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಸುಭಾಷ ಎಮ್. ಶೆಟ್ಟಿ ಮತ್ತು ಪ್ರಧಾನ ಕಛೇರಿಯ ಕಾರ್ಯನಿರ್ವಾಹಕ ಶಂಭು ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News