ಪ್ಲಾಸ್ಟಿಕ್ ಉತ್ಪಾದಕ ಫ್ಯಾಕ್ಟರಿಯನ್ನೇ ನಿಷೇಧಕ್ಕೆ ಒತ್ತಾಯ
ಬಂಟ್ವಾಳ, ಜೂ. 19: ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಬಂಟ್ವಾಳ ಪುರಸಭೆ ಅಧಿಕಾರಿಗಳು ಇತ್ತೀಚೆಗೆ ಕೈಗೊಂಡ ಪ್ಲಾಸ್ಟಿಕ್ ನಿಷೇಧ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ದಾಳಿ ವಿಚಾರಕ್ಕೆ ಸಂಬಂಧಿಸಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಈ ಕುರಿತು ಪ್ಲಾಸ್ಟಿಕ್ ಉತ್ಪಾದಕ ಫ್ಯಾಕ್ಟರಿಯನ್ನೇ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವಾಸು ಪೂಜಾರಿ ವಿಷಯ ಪ್ರಸ್ತಾಪಿಸಿ, ಪ್ಲಾಸ್ಟಿಕ್ ಫ್ಯಾಕ್ಟರಿಯನ್ನೇ ಬಂದ್ ಮಾಡಿರಿ. ಅದನ್ನು ಬಿಟ್ಟು ಗೂಡಂಗಡಿಗಳು, ಪುರಸಭಾ ವ್ಯಾಪ್ತಿಯ ಅಂಗಡಿಗಳಲ್ಲಿ ದಾಳಿ ನಡೆಸಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಬಿ.ದೇವದಾಸ ಶೆಟ್ಟಿ, ಎಸ್‌ಡಿಪಿಐ ಸದಸ್ಯ ಮುನೀಶ್ ಆಲಿ, ಈ ಕುರಿತು ಸ್ಪಷ್ಟ ನೀತಿಯನ್ನು ಅನುಸರಿಸಬೇಕು. ಕಠಿಣ ನಿಯಮ ಪಾಲನೆ ವೇಳೆ ಬಡ ಅಂಗಡಿದಾರರ ಹಿತ ಕಾಯಬೇಕು, ಸಾಧ್ಯವಾದರೆ ಪ್ಲಾಸ್ಟಿಕ್ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಲು ಪತ್ರ ಬರೆಯಿರಿ ಎಂದು ಒತ್ತಾಯಿಸಿದರು.
ಪುರಸಭೆ ನೀರಿನ ಬಿಲ್ ಏರಿಕೆಯಾಗಿದೆಯಾ ಎಂದು ಪ್ರಶ್ನಿಸಿದ ಪ್ರವೀಣ್, ಈ ಕುರಿತು ಸ್ಪಷ್ಟನೆ ಬಯಸಿದರು. ಈ ಸಂದರ್ಭ ಉತ್ತರಿಸಿದ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಒಟ್ಟು 6,300ರಷ್ಟು ನೀರಿನ ಸಂಪರ್ಕ ಇದ್ದು, 80 ರೂ. ಗೃಹಬಳಕೆಯ ಬಿಲ್ ತೆಗೆದುಕೊಳ್ಳಲಾಗುತ್ತಿದೆ. ಅದಕ್ಕೆ 10 ರೂಪಾಯಿಯನ್ನು ಸೇವಾ ಶುಲ್ಕವಾಗಿ ಸ್ವೀಕರಿಸಲಾಗುತ್ತಿದೆ ಎಂದರು.
ಫ್ಲೈಓವರ್ ಅಡಿಯಲ್ಲಿ ಇಂಟರ್ ಲಾಕ್ ಅಳವಡಿಕೆ:
ಬಿ.ಸಿ.ರೋಡಿನ ಫ್ಲೈಓವರ್ ಅಡಿಯಲ್ಲಿ ಎಸ್‌ಎಫ್‌ಸಿಯಲ್ಲಿ ಉಳಿಕೆ ನಿಧಿಯನ್ನು ಬಳಸಿ ಇಂಟರ್ ಲಾಕ್ ಅಳವಡಿಸುವ ಪ್ರಸ್ತಾಪವನ್ನು ಅಧ್ಯಕ್ಷ ರಾಮಕೃಷ್ಣ ಆಳ್ವ ಮಂಡಿಸಿದಾಗ, ಬಿಜೆಪಿ, ಎಸ್‌ಡಿಪಿಐ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಆದರೆ ಪುರಸಭೆ ಉಳಿಕೆ ನಿಧಿಯಲ್ಲಿ ಇದನ್ನು ಕೈಗೊಳ್ಳುವ ಬದಲು ಹೆದ್ದಾರಿ ಪ್ರಾಧಿಕಾರದಿಂದಲೇ ಮಾಡಿಸಬಹುದು ಎಂದು ಸದಸ್ಯ ಪ್ರವೀಣ್, ಗಂಗಾಧರ ಆಕ್ಷೇಪ ವ್ಯಕ್ತಪಡಿಸಿದರು. ಕೊಟ್ಟಾರ, ಸುರತ್ಕಲ್ ಮಾದರಿಯಲ್ಲಿ ಬಿ.ಸಿ.ರೋಡ್ ಫ್ಲೈಓವರ್ ಅಡಿಯನ್ನೂ ಸುಂದರಗೊಳಿಸಲಾಗುವುದಾಗಿ ಅಧ್ಯಕ್ಷರು ತಿಳಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ವಿದ್ಯುತ್ ಆಗಾಗ್ಗೆ ಕಡಿತಗೊಳ್ಳುವ ವಿಚಾರದ ಕುರಿತು ಮಾತನಾಡಿದ ಸದಸ್ಯ ಬಿ.ದೇವದಾಸ ಶೆಟ್ಟಿ, ಮಳೆಗಾಲಕ್ಕೆ ಮುನ್ನ ಮಾಡಬೇಕಾದ ಕೆಲಸಕಾರ್ಯಗಳನ್ನು ಇನ್ನೂ ಮೆಸ್ಕಾಂ ನಡೆಸಿಲ್ಲ ಎಂದು ದೂರಿದರು. ಇವಷ್ಟೇ ಅಲ್ಲ, ಪಿಡಬ್ಲುಡಿ, ಮೆಸ್ಕಾಂ ಮತ್ತು ಸಂಚಾರಿ ಪೊಲೀಸರ ಸಭೆಯೊಂದನ್ನು ಕರೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿ, ಅಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಇಂಜಿನಿಯರ್ ಶುಭಲಕ್ಷ್ಮೀ ಮಾಹಿತಿ ನೀಡಿ, ಕುಡಿಯುವ ನೀರಿನ ಪೈಪ್ ಲೈನ್ ಹಾಕುವ ಕಾಮಗಾರಿಯಲ್ಲಿ 90 ಕಿ.ಮೀ.ನಷ್ಟು ಹಾಕಬೇಕಾಗಿದ್ದು, 86 ಕಿ.ಮೀ ನಷ್ಟು ಕೆಲಸವಾಗಿದೆ. ಸದ್ಯಕ್ಕೆ ಮಳೆಯ ಕಾರಣ ಕೆಲಸ ನಿರ್ವಹಿಸಲು ಆಗುತ್ತಿಲ್ಲ. ಅಧಿಕೃತವಾಗಿ ನಳ್ಳಿಯನ್ನು ಪಡೆದವರಿಗೆ ನೀರು ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭ ನೀರಿನ ಸರಬರಾಜು ಸಮಸ್ಯೆಗಳ ಕುರಿತು ಸದಸ್ಯರು ಇಂಜಿನಿಯರ್ ಅವರಿಂದ ಮಾಹಿತಿ ಪಡೆದುಕೊಂಡರು.
ಪುರಸಭೆಯ ಮೀಸಲಾತಿ ಪಟ್ಟಿಯನ್ನು ಮಾಡಿದವರು ಯಾರು ಎಂದು ಪ್ರಶ್ನಿಸಿದ ಎಸ್‌ಡಿಪಿಐ. ಸದಸ್ಯ ಮುನೀಶ್ ಅಲಿ, ಇದರ ರಚನೆಯೇ ಸರಿಯಾಗಿಲ್ಲ ಎಂದರು. ಇದಕ್ಕೆ ಸರ್ವ ಸದಸ್ಯರೂ ದನಿ ಗೂಡಿಸಿದರು. ವಾರ್ಡ್ ವಿಂಗಡಣೆ ಸಹಿತ ಹಲವು ವಿಚಾರಗಳಲ್ಲಿ ದೋಷವಿದೆ. ಇದರ ಪುನರ್ ಪರಿಶೀಲನೆ ಅಗತ್ಯ ಎಂದು ದೇವದಾಸ ಶೆಟ್ಟಿ ಹೇಳಿದರು.
ಗಾಜಿನ ಗ್ಲಾಸಿನಲ್ಲಿ ನೀರು: ಪ್ಲಾಸ್ಟಿಕ್ ಮುಕ್ತ ಬಂಟ್ವಾಳ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವ ಬಂಟ್ವಾಳ ಪುರಸಭೆ ಸಭೆಯಲ್ಲಿ ಅದೇ ಸೂತ್ರ ಅನುಸರಿಸಿತು. ಮೀಟಿಂಗ್‌ನಲ್ಲಿ ಯಾವಾಗಲೂ ಕಂಡುಬರುತ್ತಿದ್ದ ಮಿನರಲ್ ವಾಟರ್ ಬಾಟಲ್ ಬದಲಾಗಿ, ಗಾಜಿನ ಗ್ಲಾಸಿನಲ್ಲಿ ನೀರು ಸರಬರಾಜಾಯಿತು. ಈ ನಡೆಯನ್ನು ಪುಸಭೆಯ ಸದಸ್ಯರು ಶ್ಲಾಘಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಪಸ್ಥಿತಿಯಲ್ಲಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಮುಹಮ್ಮದ್ ಇಕ್ಬಾಲ್, ಗಂಗಾಧರ್, ಚಂಚಲಾಕ್ಷಿ, ಮುನೀಶ್ ಅಲಿ, ಸುಗುಣ ಕಿಣಿ, ಭಾಸ್ಕರಟೈಲರ್, ಬಿ.ಮೋಹನ್, ಪ್ರವೀಣ್ ನಾನಾ ಚರ್ಚೆಗಳಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ ಉಪಸ್ಥಿತರಿದ್ದ ಸಭೆಯಲ್ಲಿ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ವಾಗತಿಸಿದರು.