ಪೊಲೀಸ್ ತನಿಖೆ ವೇಳೆ ಕಾನೂನು ಪಾಲನೆ ಅಗತ್ಯ: ವೆಂಕಟೇಶ್ ನಾಯ್ಕ

Update: 2018-06-19 17:15 GMT

ಉಡುಪಿ, ಜೂ.19: ಯಾವುದೇ ಪ್ರಕರಣದಲ್ಲಿ ಓರ್ವ ಆರೋಪಿಗೆ ಶಿಕ್ಷೆ ಯಾಗಬೇಕಾದರೆ ಆತನ ತಪ್ಪನ್ನು ಸಾಬೀತು ಪಡಿಸುವುದು ಅತಿ ಅಗತ್ಯ. ಒಂದು ಸಣ್ಣ ಅನುಮಾನ ಬಂದರೂ ಕೂಡ ಆರೋಪಿ ಬಿಡುಗಡೆ ಆಗುವ ಸಾಧ್ಯತೆ ಗಳಿರುತ್ತದೆ. ಆದುದರಿಂದ ಪೊಲೀಸರು ತನಿಖಾ ಸಂದರ್ಭದಲ್ಲಿ ಅಗತ್ಯವಾಗಿ ಕಾನೂನು ಪಾಲನೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ ನಾಯ್ಕ ಟಿ. ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ, ಸಂತ್ರಸ್ತರ ಪರಿಹಾರ ಯೋಜನೆ ಹಾಗೂ ದಿನನಿತ್ಯದ ಕರ್ತವ್ಯದಲ್ಲಿ ಪೊಲೀಸರಿಗೆ ಎದು ರಾಗುವ ಸಮಸ್ಯೆಗಳು ಎಂಬ ವಿಷಯಗಳ ಕುರಿತು ಉಡುಪಿ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ಇಂದು ಪೊಲೀಸರಿಗಾಗಿ ಆಯೋಜಿಲಾದ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಾಡುವ ಸಣ್ಣ ತಪ್ಪು ಕ್ರಿಮಿನಲ್ ಪ್ರಕರಣದ ಇಡೀ ಸ್ವರೂಪವನ್ನೇ ಬದಲಾಯಿಸುವ ಸಾಧ್ಯತೆ ಇರುತ್ತದೆ. ಪೊಲೀಸ್ ತನಿಖೆ ಸಂದರ್ಭದಲ್ಲಿ ಹಲವು ನೂನ್ಯತೆಗಳು ಕಂಡುಬರುತ್ತವೆ. ತನಿಖಾಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡದಿದ್ದರೆ ಕ್ರಿಮಿನಲ್ ಪ್ರಕರಣದ ಮೇಲೆ ಸಾಕಷ್ಟು ಪರಿಣಾಮಗಳು ಬೀರುತ್ತವೆ. ಸಾಕ್ಷ ಮತ್ತು ದಾಖಲಾತಿಗಳ ಸಂಗ್ರಹ ಹಾಗೂ ಬಂಧನದ ಸಂದರ್ಭದಲ್ಲಿ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳುವುದು ಅತಿಅಗತ್ಯ ಎಂದರು.

ಪೊಲೀಸರು ಕಾನೂನು ಮತ್ತು ಜನಸಾಮಾನ್ಯರ ನಡುವಿನ ಪ್ರಮುಖ ಕೊಂಡಿಯಾಗಿದ್ದಾರೆ. ಪೊಲೀಸರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮಹಾನ್ ರಕ್ಷಕರಾಗಿದ್ದಾರೆ. ತಪ್ಪು ಮಾಡಿದವರಿಗೆ ದಂಡನೆ ವಿಧಿಸು ವುದು ಮತ್ತು ಶಿಕ್ಷೆ ಗುರಿಪಡಿಸುವ ಬಹಳ ದೊಡ್ಡ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಪೊಲೀಸರು ಇಂದು ಬಹಳ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸೇರಿದಂತೆ ಪ್ರತಿಯೊಂದು ಇಲಾಖೆಯ ಮಧ್ಯೆ ಸಮನ್ವಯತೆ ಮುಖ್ಯ. ನ್ಯಾಯಾಂಗ, ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸಮನ್ವಯತೆಯಿಂದ ಕೆಲಸ ಮಾಡಿದ ಪರಿಣಾಮ ಅನ್ಯಾಯಕ್ಕೆ ಒಳಗಾದ ಸಾಕಷ್ಟು ಮಹಿಳೆಯರಿಗೆ ನ್ಯಾಯ ಸಿಕ್ಕಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಬ. ನಿಂಬರಗಿ ಮಾತನಾಡಿ, ಪೊಲೀಸ್, ನ್ಯಾಯಾಂಗ ಹಾಗೂ ಮಾಧ್ಯಮ ಒಂದಕ್ಕೊಂದು ಅವಲಂಬಿತವಾಗಿವೆ. ಯಾವುದೇ ಒಂದು ಪ್ರಕರಣದಲ್ಲಿ ನ್ಯಾಯ ಒದಗಿಸುವಲ್ಲಿ ಪೊಲೀಸರ ಪಾತ್ರ ಅತಿ ಮುಖ್ಯವಾಗಿರುತ್ತದೆ. ಪೊಲೀಸರು ತನಿಖೆ ನಡೆಸಿ ಸಲ್ಲಿಸುವ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯ ಪರಿಶೀಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ಹಾಗೂ ದೂರುದಾರರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶ ವಿವೇಕಾ ನಂದ ಎಸ್.ಪಂಡಿತ್, ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ ಮಾತ ನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಲತಾ ಸ್ವಾಗತಿಸಿದರು. ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

ಪೊಲೀಸರ ದುವರ್ತನೆ ಬಗ್ಗೆ ದೂರು
ಪೊಲೀಸ್ ದೂರು ಪ್ರಾಧಿಕಾರ ಸಭೆಯನ್ನು ಈಗಾಗಲೇ ನಡೆಸಲಾಗಿದ್ದು, ಇದರಲ್ಲಿ ಹೆಚ್ಚಿನ ದೂರುಗಳನ್ನು ಆರೋಪಿಗಳು ನೀಡುತ್ತಿದ್ದಾರೆ. ಹೆಚ್ಚಿನ ದೂರುಗಳು ಪೊಲೀಸರು ನಡೆದುಕೊಂಡ ರೀತಿ, ಪೊಲೀಸರ ದುವರ್ತನೆಯ ಬಗ್ಗೆಯೇ ಬರುತ್ತಿವೆ. ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು ಪ್ರಕರಣದ ತನಿಖೆ ನಡೆಸುವ ಸಂದರ್ಭದಲ್ಲಿ ಸಂಯಮದಿಂದ ವರ್ತಿಸಬೇಕು. ಹೀಗಾದರೆ ಪ್ರಾಧಿಕಾರಕ್ಕೆ ಬರುವ ದೂರುಗಳನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News