ಉಳ್ಳಾಲ: ಶ್ರೀಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಶಾಖಾರಂಭ

Update: 2018-06-19 17:40 GMT

ಮಂಗಳೂರು, ಜೂ.19: ಶ್ರೀಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 5ನೆ ಉಳ್ಳಾಲ ಶಾಖೆಯು ಉಳ್ಳಾಲ ಅಬ್ಬಕ್ಕ ಸರ್ಕಲ್ ಬಳಿ ಇರುವ ಶ್ರೀರಾಮ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ನೂತನ ಉಳ್ಳಾಲ ಶಾಖೆಗೆ ಚಾಲನೆ ನೀಡಿದ ಶ್ರೀಗುರು ಪರಾಶಕ್ತಿ ಮಠ ಮರಕಡದ ನರೇಂದ್ರನಾಥ್ ಯೋಗೀಶ್ವರೇಶ್ವರ ಸ್ವಾಮಿಜಿ ಆಶೀರ್ವಚನ ನೀಡಿ ಹಿಂದೆ ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಅಲೆದಾಡಬೇಕಿತ್ತು. ಈಗ ಹಾಗಿಲ್ಲ. ಅಂದು ಸೀಮಿತ ಸಮಾಜದ ಹಿತದೃಷ್ಟಿಯಿಂದ ಸ್ಥಾಪನೆತಗೊಂಡಿದ್ದ ಈ ಸಂಘವು ಇಂದು ಎಲ್ಲಾ ಜಾತಿ, ಸಮಾಜದ ಜನರನ್ನು ತನ್ನತ್ತ ಸೆಳೆದಿದೆ. ಅಷ್ಟೇ ಅಲ್ಲದೆ ಅವರೆಲ್ಲಾ ಸ್ವಾವಲಂಬಿ ಬದುಕು ಕಳೆಯುವಂತೆ ದಿಟ್ಟ ಹೆಜ್ಜೆಯನ್ನಿಟಿದೆ ಎಂದು ಹೇಳಿದರು.

ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಮಾತನಾಡಿ ಸಮಾಜ ಅಭಿವೃದ್ಧಿಯಾಗಬೇಕಾದರೆ ಸಹಕಾರ ಸಂಘ ಅತ್ಯಗತ್ಯ. ಸಣ್ಣ ಸಮಾಜಕ್ಕೆ ಆರ್ಥಿಕ ಸಬಲೀಕರಣ ನೀಡಲು ಯಾರು ಮುಂದೆ ಬರುವುದಿಲ್ಲ. ಆದರೆ ಇಂತಹ ಸಹಕಾರ ಸಂಘವು ಪ್ರತೀ ಸಮಾಜದಲ್ಲಿ ನಿರ್ಮಾಣವಾದಾಗ ಸಣ್ಣ ವ್ಯಾಪಾರಿಗಳಿಗೆ, ಶಕ್ತಿ ತುಂಬುವ ಕಾರ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗಣಕೀಕರಣ ಉದ್ಘಾಟಿಸಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಮಾತನಾಡಿ ಸಹಕಾರ ಸಂಘವು ವ್ಯವಹಾರ ಮೀರಿ ಸಮಾಜಕ್ಕೆ ಅರ್ಪಣೆ ಮಾಡಿದಂತಹ ಸಂಸ್ಥೆಯಾಗಿದೆ. ಬಡ ವ್ಯಕ್ತಿಗಳಿಗೆ ಸಹಕಾರ ಮಾಡುವ ಸಂಸ್ಥೆ ಎನ್ನುವುದಕ್ಕೆ 100 ಕೋ.ರೂ. ವ್ಯವಹಾರ ನಡೆಸಿ 1 ಕೋ.ರೂ. ಲಾಭ ಪಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಮಾಜಿ ಸಚಿವ ಹಾಗೂ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಜೆ.ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ 20 ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಸಂಸ್ಥೆ 2,500ಕ್ಕೂ ಹೆಚ್ಚು ಆಟೊ ರಿಕ್ಷಾ ಚಾಲಕರಿಗೆ ಸಾಲ ನೀಡುವ ಮೂಲಕ ಅವರನ್ನು ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹಿಸಿದೆ. ಸಂಸ್ಥೆಯಲ್ಲಿ ಸಣ್ಣ ವ್ಯಾಪಾರಿಗಳಿಗೆ 5 ಸಾವಿರದಿಂದ 50 ಲಕ್ಷದವರೆಗೆ ಸಾಲ ನೀಡಿ ಉದ್ಯಮಿಗಳನ್ನಾಗಿ ರೂಪಿಸುವ ಕಾರ್ಯ ನಡೆಸಿದೆ. ಸಹಕಾರಿ ಸಂಘವನ್ನು ಬೆಳಸುವಲ್ಲಿ ಸದಸ್ಯರ ಉತ್ಸಾಹ ಮತ್ತು ನಿರ್ದೇಶಕರ ಸಹಕಾರ ಅಪಾರ. ಜೆಪ್ಪು ಮೋರ್ಗನ್‌ಗೇಟ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಸಂಘವು ಇನ್ನೂ ಕೆಲವು ಹೊಸ ಶಾಖೆಗಳನ್ನು ತೆರೆಯಲಿದೆ ಎಂದರು.

ಉಳ್ಳಾಲ ವಲಯ ರಾಮರಾಜ್ಯ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸೀತಾರಾಮ್ ಕೊಪ್ಪಲ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯ ಎಂ. ಮುಸ್ತಫಾ ಉಳ್ಳಾಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಹಕಾರ ಸಂಘದ ಉಪಾಧ್ಯಕ್ಷ ಕೆ.ದಿನೇಶ್ ರಾವ್, ನಿರ್ದೇಶಕರಾದ ಡಾ.ಜೆ.ರವೀಂದ್ರ, ಡಾ. ಎಚ್.ಪ್ರಭಾಕರ್, ಕೆ.ಎಸ್.ರಂಜನ್, ಕೆ.ರವೀಂದ್ರ, ಪಿ.ಬಾಬು, ಕೆ. ಸುರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ. ಉಪಸ್ಥಿತರಿದ್ದರು. ನಿರ್ದೇಶಕ ಕೆ.ಎಸ್. ರಾಮಚಂದ್ರ ಸ್ವಾಗತಿಸಿದರು. ಜೆ.ಕೃಷ್ಣಾನಂದ ರಾವ್ ಪ್ರಸ್ತಾವನೆಗೈದರು. ಮಂಜುಳಾ ಎ. ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News