ಜಮ್ಮು ಕಾಶ್ಮೀರದಲ್ಲಿ ಶೀಘ್ರ ಚುನಾವಣೆ : ಉಮರ್ ಅಬ್ದುಲ್ಲಾ ಆಗ್ರಹ

Update: 2018-06-19 18:27 GMT

ಶ್ರೀನಗರ, ಜೂ. 19: ರಾಜ್ಯದಲ್ಲಿ ಶೀಘ್ರ ಚುನಾವಣೆ ನಡೆಸುವಂತೆ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ನಾಯಕ ಉಮರ್ ಅಬ್ದುಲ್ಲಾ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಪಿಡಿಪಿ-ಬಿಜೆಪಿ ಸರಕಾರ ಪತನಗೊಂಡ ಬಳಿಕ ರಾಜ್ಯಪಾಲ ಎನ್.ಎನ್. ವೊಹ್ರಾ ಅವರನ್ನು ಭೇಟಿಯಾದ ಬಳಿಕ ಅಬ್ದುಲ್ಲಾ ಮಾಧ್ಯಮದವರೊಂದಿಗೆ ಮಾತನಾಡಿದರು.

 ‘‘ನಾನು ರಾಜ್ಯಪಾಲರನ್ನು ಭೇಟಿಯಾಗಿದ್ದೇನೆ. ನ್ಯಾಶನಲ್ ಕಾನ್ಫರೆನ್ಸ್ ಸರಕಾರ ರಚಿಸಲು ಜನಾದೇಶ ಇಲ್ಲ ಎಂದು ನಾನು 2014ರ ಚುನಾವಣೆಯ ಸಂದರ್ಭ ಹೇಳಿದ್ದೆ. ಈಗ ಕೂಡ ನಮಗೆ ಜನಾದೇಶ ಇಲ್ಲ’’ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸರಕಾರ ರಚಿಸಲು ನಾವು ಇತರ ಪಕ್ಷಗಳನ್ನಾಗಲಿ, ಇತರ ಪಕ್ಷಗಳು ನಮ್ಮನ್ನಾಗಲಿ ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.

‘‘ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಲು ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸುವುದು ಬಿಟ್ಟರೆ ರಾಜ್ಯಪಾಲರಿಗೆ ಬೇರೆ ಆಯ್ಕೆ ಇಲ್ಲ. ಆದುದರಿಂದ ಚುನಾವಣೆ ನಡೆಸಿದ ಬಳಿಕ ಪ್ರಜಾಸತ್ತಾತ್ಮಕ ಸರಕಾರ ರೂಪುಗೊಳ್ಳಬೇಕು’’ ಎಂದು ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News