ಉಡುಪ ಫ್ಯಾಮಿಲಿ ಟ್ರಸ್ಟ್‌ನಿಂದ ಡಾ.ರಾಮದಾಸ ಪೈಗೆ ಸನ್ಮಾನ

Update: 2018-06-19 18:31 GMT

ಉಡುಪಿ, ಜೂ.19: ಶಿಕ್ಷಣ, ಆರೋಗ್ಯ ಹಾಗೂ ಸಮುದಾಯ ಸೇವೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಕೊಡೆತ್ತೂರು ಉಡುಪಿ ಫ್ಯಾಮಿಲಿ ಫೌಂಡೇಷನ್ ಟ್ರಸ್ಟ್ ಮಾಹೆಯ ಚಾನ್ಸಲರ್ ಡಾ.ರಾಮದಾಸ ಎಂ.ಪೈ ಅವರನ್ನು ಇಂದು ಮಣಿಪಾಲದ ಮಾಹೆ ವಿವಿ ಕಚೇರಿಯನ್ನು ಅವರನ್ನು ಸನ್ಮಾನಿಸಿತು.

 ಅಮೆರಿಕದ ಅರೆಜೋನದಲ್ಲಿ ವಿಜ್ಞಾನಿಯಾಗಿರುವ ಡಾ.ಕೆ.ಬಿ.ಉಡುಪ ಅಧ್ಯಕ್ಷ ಹಾಗೂ ಟ್ರಸ್ಟಿಯಾಗಿರುವ ಉಡುಪ ಫ್ಯಾಮಿಲಿ ಟ್ರಸ್ಟ್‌ನಲ್ಲಿ ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ ಕಾರ್ಯದರ್ಶಿ ಯಾಗಿ ಹಾಗೂ ಮಾಹೆಯ ಸಂಶೋಧನಾ ನಿರ್ದೇಶಕ ಡಾ.ಎನ್.ಉಡುಪ ಸಂಚಾಲಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ಕಾರ್ಯಕ್ರಮದಲ್ಲಿ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಅವರು ಉಪಸ್ಥಿತರಿದ್ದರು.

ಇತ್ತೀಚಿಗಷ್ಟೇ ಅಸ್ತಿತ್ವಕ್ಕೆ ಬಂದಿರುವ ಟ್ರಸ್ಟ್, ಮೊದಲ ಕಾರ್ಯಕ್ರಮವಾಗಿ ಮಾಹೆಯಲ್ಲಿ ಆರೋಗ್ಯ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನೆ, ಸಾಹಿತ್ಯದ ಕುರಿತಂತೆ ಪ್ರತಿ ವರ್ಷ ಮೂರು ದತ್ತಿ ಉಪನ್ಯಾಸಗಳನ್ನು ಏರ್ಪಡಿಸಲಿದೆ. ಮೊದಲ ದತ್ತಿ ಉಪನ್ಯಾಸ ಇದೇ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಡಾ. ಎನ್.ಉಡುಪ ತಿಳಿಸಿದರು.

ಟ್ರಸ್ಟ್ ಮಣಿಪಾಲ ಗುಂಪಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಬಡರೋಗಿಗಳಿಗೆ ಆರ್ಥಿಕ ನೆರವನ್ನು ನೀಡಲಿದೆ. ಅಲ್ಲದೇ ಮಾಹೆಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ಸಹ ನೀಡುವ ಯೋಜನೆಯನ್ನು ಹಾಕಿಕೊಂಡಿದೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News