ಹೆತ್ತವರಿಂದ ಶಿಶುಗಳ ಬೇರ್ಪಡಿಸುವ ಸುದ್ದಿ ಓದುವಾಗ ಬಿಕ್ಕಳಿಸಿದ ನಿರೂಪಕಿ

Update: 2018-06-20 15:18 GMT

ವಾಶಿಂಗ್ಟನ್, ಜೂ. 20: ಅಮೆರಿಕವು ತನ್ನ ಮೆಕ್ಸಿಕೊ ಗಡಿಯಲ್ಲಿ ಅಕ್ರಮ ವಲಸಿಗ ಹೆತ್ತವರಿಂದ ಅವರ ಶಿಶುಗಳನ್ನು ಬೇರ್ಪಡಿಸಿ ಆಶ್ರಯ ಸಂಸ್ಥೆಗಳಿಗೆ ಕಳುಹಿಸುತ್ತಿರುವ ಸುದ್ದಿಯ ವಿವರಗಳನ್ನು ನೇರಪ್ರಸಾರದಲ್ಲಿ ನೀಡುತ್ತಿದ್ದಾಗ ನಿರೂಪಕಿಯೊಬ್ಬರು ಬಿಕ್ಕಳಿಸಿ ಅತ್ತುಬಿಟ್ಟ ಘಟನೆ ನಡೆದಿದೆ.

ಎಂಎಸ್‌ಎನ್‌ಬಿಸಿ ಟಿವಿ ಚಾನೆಲ್‌ನ ರಚೆಲ್ ಮ್ಯಾಡೋ ತನ್ನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ, ಬ್ರೇಕಿಂಗ್ ಸುದ್ದಿಯೊಂದು ಬಂತು. ಅವರು ಅದನ್ನು ಓದಲು ಯತ್ನಿಸಿದರು.

ಆದರೆ, ಅಷ್ಟರಲ್ಲಿ ಅವರಿಗೆ ದುಃಖ ಉಮ್ಮಳಿಸಿ ಬಂತು. ಆ ಸುದ್ದಿಯನ್ನು ಅಲ್ಲೇ ಬಿಟ್ಟ ಅವರು ಇನ್ನೊಂದು ಸುದ್ದಿಯತ್ತ ಹೊರಳಿದರು.

ಬಳಿಕ ಟ್ವೀಟ್ ಮಾಡಿದ ಅವರು, ‘‘ಕ್ಷಮಿಸಿ, ನಾನು ಟಿವಿಯಲ್ಲಿರುವಾಗ ಸುದ್ದಿ ಹೇಳುವುದು ನನ್ನ ಕೆಲಸವಾಗಿತ್ತು’’ ಎಂದು ಹೇಳಿದ್ದಾರೆ.

ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ವಲಸಿಗರ ಸಣ್ಣ ಮಕ್ಕಳನ್ನು ಅವರಿಂದ ಬೇರ್ಪಡಿಸಿ ಸೌತ್ ಟೆಕ್ಸಾಸ್‌ನಲ್ಲಿರುವ ಮಕ್ಕಳ ಆಶ್ರಯ ಧಾಮಕ್ಕೆ ಕಳುಹಿಸುವ ಅಧಿಕಾರಿಗಳ ನಿರ್ಧಾರಕ್ಕೆ ಸಂಬಂಧಿಸಿದ ಸುದ್ದಿಯನ್ನು ಅವರು ಹೇಳಲು ಪ್ರಯತ್ನಿಸುತ್ತಿದ್ದರು.

ವಲಸಿಗರು ಜೈಲಿಗೆ, ಮಕ್ಕಳು ಶಿಶು ಕೇಂದ್ರಕ್ಕೆ

ಮೆಕ್ಸಿಕೊ ಗಡಿಯಲ್ಲಿ ಅಕ್ರಮವಾಗಿ ಅಮೆರಿಕ ಪ್ರವೇಶಿಸುವ ವಲಸಿಗರನ್ನು ಅಮೆರಿಕವು ಬಂಧಿಸಿ ಜೈಲಿಗೆ ಕಳುಹಿಸುತ್ತಿದೆ. ಜೈಲಿನಲ್ಲಿ ಮಕ್ಕಳನ್ನು ಅವರ ಹೆತ್ತವರೊಂದಿಗೆ ಇಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸಲಾಗುತ್ತಿದೆ.

ಅಮೆರಿಕ ಸರಕಾರವು ಮೇ ತಿಂಗಳ ಆದಿ ಭಾಗದಲ್ಲಿ ಅಕ್ರಮ ವಲಸೆಗೆ ಶೂನ್ಯ ಸಹಿಷ್ಣುತೆ ಘೋಷಿಸಿದ ಬಳಿಕ, ಗಡಿಯಲ್ಲಿ 2,300ಕ್ಕೂ ಅಧಿಕ ಮಕ್ಕಳನ್ನು ಹೆತ್ತವರಿಂದ ಪ್ರತ್ಯೇಕಿಸಿ ಶಿಶು ಕೇಂದ್ರಗಳಿಗೆ ಕಳುಹಿಸಲಾಗಿದೆ ಹಾಗೂ ಹೆತ್ತವರನ್ನು ಜೈಲಿಗೆ ಕಳುಹಿಸಲಾಗಿದೆ.

ಆದರೆ, ಡೊನಾಲ್ಡ್ ಟ್ರಂಪ್ ಸರಕಾರದ ಈ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News