×
Ad

ಮಂಗಳೂರಿನಲ್ಲಿ ಮುಂದುವರಿದ ವರುಣನ ಆರ್ಭಟ

Update: 2018-06-20 21:30 IST

ಮಂಗಳೂರು, ಜೂ.19: ನಗರದಲ್ಲಿ ಬುಧವಾರವೂ ಬೆಳಗ್ಗೆಯಿಂದ ಎಡೆಬಿಡದೆ ಸುರಿಯುತ್ತಿದ್ದು, ದ.ಕ. ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ಕರಾವಳಿಯಲ್ಲಿ ಮತ್ತೆ ವರುಣನ ಆರ್ಭಟ ಮುಂದುವರಿದಿದೆ.

ಇನ್ನೂ ನಾಲ್ಕೈದು ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ. ನಗರದ ಕೊಟ್ಟಾರಚೌಕಿ ಸೇರಿದಂತೆ ವಿವಿಧೆಡೆ ಹಳ್ಳಕೊಳ್ಳ-ರಾಜಕಾಲುವೆಗಳು ತುಂಬಿ ಹರಿಯುತ್ತಿವೆ.

ಮಂಗಳೂರು ನಗರ ಸಮೀಪದ ಪಡೀಲಿನಲ್ಲಿ ಸಣ್ಣ ಮಳೆಯಾದರೂ ಪಡೀಲು ಕೆಳಸೇತುವೆಯ ಅಡಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆನೀರು ಜಮಾವಣೆಯಾಗಿದೆ. ಇದು ವಾಹನ ಸವಾರರು, ಪಾದಚಾರಿಗಳು ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿ ತಲೆದೋರಿದೆ. ಸಮೀಪದಲ್ಲೇ ತೋಡೊಂದು ಇದ್ದು, ಮಳೆನೀರು ತೋಡು ತುಂಬಿ ರಸ್ತೆಯ ಮೇಲೆಯೇ ಹರಿಯುತ್ತಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದ್ದವು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸತತ ಮೂರು ದಿನಗಳಿಂದ ನಂತೂರು-ಪಂಪ್‌ವೆಲ್-ತೊಕ್ಕೊಟ್ಟುವರೆಗೆ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ನಂತೂರು-ಪಂಪ್‌ವೆಲ್-ತೊಕ್ಕೊಟ್ಟು ಜಂಕ್ಷನ್‌ನಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಟ್ರಾಫಿಕ್‌ಗೆ ಕಾರಣ ಎಂದು ತಿಳಿದುಬಂದಿದೆ. ಮೇ 29ರಂದು ಸುರಿದ ಮಹಾಮಳೆಗೆ ಪಡೀಲಿನ ಕೆಳಸೇತುವೆ ಸಂಪೂರ್ಣ ಮುಳುಗಿತ್ತು.

ಜೂ. 25ರವರೆಗೆ ಭಾರೀ ಮಳೆ:
ಜೂ.21, 22ರಂದು ರಾಜ್ಯದ ಕರಾವಳಿ ಜಿಲ್ಲೆಗಳ ವಿವಿಧೆಡೆ ಭಾರೀ ಮಳೆ ಬೀಳಲಿದ್ದು, 115 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ. ಜೂ.23ರಿಂದ 25ರವರೆಗೆ ಕರಾವಳಿ ಭಾಗದಲ್ಲಿ 65 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News