×
Ad

ಉಡುಪಿ: ಗ್ರಾಪಂಗಳಿಗೆ ಕೇಂದ್ರದ ಬಾಕಿ ಅನುದಾನ ನೀಡುವಂತೆ ಆಗ್ರಹಿಸಿ ಮನವಿ

Update: 2018-06-20 21:31 IST

ಉಡುಪಿ, ಜೂ.20: ರಾಜ್ಯದ ಗ್ರಾಮ ಪಂಚಾಯತ್‌ಗಳಿಗೆ ಕೇಂದ್ರ ಸರಕಾರ ಸಮರ್ಪಕ ಅನುದಾನ ನೀಡದಿರುವ ಬಗ್ಗೆ ಉಡುಪಿ ಜಿಲ್ಲಾ ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯು ಇಂದು ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮ ಅವರಿಗೆ ಮನವಿ ಸಲ್ಲಿಸಿತು.

ಕೇಂದ್ರ ಸರಕಾರವು ಕರ್ನಾಟಕ ರಾಜ್ಯದ ಕುಡಿಯುವ ನೀರು ಹಾಗೂ ಉದ್ಯೋಗ ಖಾತರಿ ಯೋಜನೆಗಳಿಗೆ ನೀಡಬೇಕಾದ ಅನುದಾನದಲ್ಲಿ ಒಂದು ಸಾವಿರ ರೂ. ಕೋಟಿಗಳಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದೆ. 2013ರಲ್ಲಿ ಕುಡಿಯುವ ನೀರಿನ ರಾಜ್ಯದ ಪಾಲು 868 ಕೋಟಿಗಳಾಗಿದ್ದರೆ ಕೇಂದ್ರ ಸರಕಾರದ ಪಾಲು 960ಕೋಟಿ ರೂ. ಮತ್ತು 2017-18ರಲ್ಲಿ ಸುಮಾರು 300 ಕೋಟಿ ರೂ. ಬರಬೇಕಾಗಿದೆ ಎಂದು ನಿಯೋಗ ಮನವಿಯಲ್ಲಿ ದೂರಿದೆ.

ಕುಡಿಯುವ ನೀರಿನ ಅನುದಾನವನ್ನು ರಾಜ್ಯ ಹಾಗೂ ಕೇಂದ್ರಗಳು ಶೇ.50- 50ರ ಅನುಪಾತದಲ್ಲಿ ನೀಡಬೇಕು. ಆದರೆ ರಾಜ್ಯ ಸರಕಾರವು ಕಳೆದ ಐದು ವರ್ಷಗಳಲ್ಲಿ ತನ್ನ ಸಾಲಿನ ಶೇ.88ರಷ್ಟನ್ನು ನೀಡಿದ್ದು, ಕೇಂದ್ರ ಸರಕಾರ ಕೇವಲ ಶೇ.12ರಷ್ಟು ಮಾತ್ರ ನೀಡಿದೆ. ವಿಶೇಷವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಸರಕಾರ ತಾತ್ಸಾರ ತೋರಿರುವುದು ವಿಷಾಧನೀಯ ಎಂದು ಮನವಿ ಯಲ್ಲಿ ತಿಳಿಸಲಾಗಿದೆ.

ದೇಶದ ಎಲ್ಲ ರಾಜ್ಯ ಗಳನ್ನು ಸಮಾನವಾಗಿ ನೋಡಬೇಕಾದ ಕೇಂದ್ರ ಸರಕಾರ ತಾರತಮ್ಯ ಮಾಡಿರುವುದು ಖಂಡನೀಯ. ಈಗಾಗಲೇ ಜಿಎಸ್‌ಟಿಯಿಂದ ಇಡೀ ದೇಶದಲ್ಲೇ ರಾಜ್ಯವೇ ಹೆಚ್ಚು ಪಾಲನ್ನು ನೀಡುತ್ತಿದೆ. ಆದುದರಿಂದ ರಾಜ್ಯಕ್ಕೆ ಸಲ್ಲಬೇಕಾದ ಅನುದಾನದ ಪಾಲನ್ನು ಕೇಂದ್ರ ಸರಕಾರ ಕೂಡಲೇ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಮನವಿಯನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವೀಕರಿಸಿದರು. ನಿಯೋಗದಲ್ಲಿ ಸಂಘಟನೆ ಜಿಲ್ಲಾ ಸಂಯೋಜಕಿ ರೋಶಿನಿ ಒಲಿವೇರ, ಮೇರಿ ಡಿಸೋಜ, ವರೋನಿಕಾ ಕರ್ನೆಲಿಯೊ, ವಾಣಿ ಆರ್.ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಪ್ರಮೀಳಾ ಜತ್ತನ್ನ, ದೇವೇಂದ್ರ ಕೋಟ, ಮುಹಮ್ಮದ್ ರಫೀಕ್, ಸತೀಶ್, ಶಂಕರ್ ನಾಯಕ್, ಸೂರಿ ಸಾಲ್ಯಾನ್, ಫ್ರಾಂಕಿ ಡಿಸೋಜ, ಸೋಮನಾಥ್ ಬಿ.ಕೆ., ಯಶೋಧಾ ಎಂ., ಉಷಾ ಪೂಜಾರಿ, ವೈ.ಬಿ.ರಾಘವೇಂದ್ರ, ಅನುಷಾ, ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News