×
Ad

ವೇದಾಂತ ಕಾರ್ಖಾನೆಯಲ್ಲಿ ಆ್ಯಸಿಡ್ ಸೋರಿಕೆ: ಪರಿಣಾಮ ಭೀಕರವಾಗಬಹುದು; ಕಂಪೆನಿಯಿಂದ ಎಚ್ಚರಿಕೆ

Update: 2018-06-20 21:39 IST

ತೂತುಕುಡಿ, ಜೂ.20: ತಮಿಳುನಾಡಿನ ತೂತುಕುಡಿಯಲ್ಲಿರುವ ವೇದಾಂತ ಲಿಮಿಟೆಡ್‌ನ ತಾಮ್ರ ಕರಗಿಸುವ ಕಾರ್ಖಾನೆಯ ಟ್ಯಾಂಕ್‌ವೊಂದರಿಂದ ಗಂಧಕಾಮ್ಲ ಸೋರಿಕೆಯಾಗುತ್ತಿದ್ದು ಅದನ್ನು ತಕ್ಷಣ ಸರಿಪಡಿಸದೆ ಹೋದರೆ ಸುತ್ತಮುತ್ತಲ ಪರಿಸರದ ಮೇಲೆ ಭೀಕರ ಹಾನಿ ಸಂಭವಿಸಬಹುದು ಎಂದು ವೇದಾಂತ ಎಚ್ಚರಿಸಿದೆ.

ತೂತುಕುಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಲಂಡನ್ ಮೂಲದ ವೇದಾಂತ ರಿಸೋರ್ಸ್‌ನ ಭಾರತೀಯ ಅಂಗಸಂಸ್ಥೆಯಾದ ವೇದಾಂತ ಲಿಮಿಟೆಡ್‌ನ ತಾಮ್ರ ಕರಗಿಸುವ ಕಾರ್ಖಾನೆಯನ್ನು ಸ್ಥಳೀಯರ ತೀವ್ರ ಹೋರಾಟದ ನಂತರ ಇತ್ತೀಚೆಗೆ ಸ್ಥಗಿತಗೊಳಿಸಲಾಗಿದೆ. ಆಮ್ಲ ಸೋರಿಕೆ ಬಗ್ಗೆ ಹೇಳಿಕೆ ನೀಡಿರುವ ಜಿಲ್ಲಾಡಳಿತ ಈ ಸೋರಿಕೆಯು ಅತ್ಯಂತ ಕನಿಷ್ಟವಾಗಿದ್ದು ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಆದರೆ ಈ ಬಗ್ಗೆ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವೇದಾಂತ, ಟ್ಯಾಂಕ್‌ನ ಪೈಪ್‌ನಲ್ಲಿ ತೀವ್ರ ಸೋರಿಕೆಯಾಗುತ್ತಿದೆ. ಅದನ್ನು ತಡೆಯದೆ ಹೋದರೆ ದುರಂತ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದೆ.

ಗಂಧಕಾಮ್ಲ ಸೋರಿಕೆಯಿಂದ ಭೀಕರ ಅಪಾಯ ಎದುರಾಗಬಹುದು. ಈ ಕಾರ್ಖಾನೆಯಲ್ಲಿ ಇತರ ಅಗ್ನಿಕಾರಕ ರಾಸಾಯನಿಕಗಳಿದ್ದು ಅವುಗಳಿಗೆ ಈ ಆಮ್ಲ ತಾಗಿದರೆ ಅನಾಹುತ ಸಂಭವಿಸಿ ಸಾವು-ನೋವು ಸಂಭವಿಸುವ ಸಾಧ್ಯತೆಯಿದೆ. ಹಾಗಾಗಿ ಸ್ವಲ್ಪ ಸಮಯದ ಮಟ್ಟಿಗೆ ಕಾರ್ಖಾನೆಗೆ ವಿದ್ಯುತ್ ಪೂರೈಕೆ ಮಾಡಿ ಸಮಸ್ಯೆಯನ್ನು ಸರಿಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಸಂಸ್ಥೆ ಮನವಿ ಮಾಡಿಕೊಂಡಿದೆ. ಆದರೆ ಈ ಹೇಳಿಕೆಯನ್ನು ತಳ್ಳಿ ಹಾಕಿರುವ ಜಿಲ್ಲಾಡಳಿತದ ಹಿರಿಯ ಅಧಿಕಾರಿ ಸಂದೀಪ್ ನಂದುರಿ, ಕಾರ್ಖಾನೆಯಲ್ಲಿ ಕನಿಷ್ಟ ಪ್ರಮಾಣದಲ್ಲಿ ಆಮ್ಲ ಸೋರಿಕೆಯಾಗುತ್ತಿದೆ. ಮತ್ತು ನಾವು ಟ್ಯಾಂಕ್‌ನಿಂದ ಸಂಪೂರ್ಣ ಆಮ್ಲವನ್ನು ಖಾಲಿ ಮಾಡುವ ಕೆಲಸದಲ್ಲಿ ನಿರತರಾಗಿದ್ದೇವೆ. ಅವರು ಏನು ಹೇಳುತ್ತಾರೋ ಅದು ಅವರಿಗೆ ಬಿಟ್ಟದ್ದು. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News