ಪುತ್ತೂರು : ಬೈಕ್ ಗಳಿಗೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ
ಪುತ್ತೂರು, ಜೂ. 20: ಮೂರು ಬೈಕ್‌ಗಳಿಗೆ ಕಾರೊಂದು ಸರಣಿಯಾಗಿ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ನಾಲ್ವರು ಗಾಯಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯಲ್ಲಿನ ಪುತ್ತೂರು ನಗರದ ಹೊರವಲಯದ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬುಧವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ ಶ್ರೀಧರ ಗೌಡ (44) , ವಿಟ್ಲ ಸಮೀಪದ ಜೋಗಿಬೆಟ್ಟು ನಿವಾಸಿ ಸಚಿನ್ (23) , ವಿಟ್ಲ ಸಮೀಪದ ಕೇಪು ನಿವಾಸಿ ಶಿವರಾಮ ಶೆಟ್ಟಿ (45) ಮತ್ತು ವಿಟ್ಲ ಉಕ್ಕುಡ ನಿವಾಸಿ ಪವನ್ (25) ಗಾಯಗೊಂಡವರು.
ಕಬಕದಿಂದ ಪುತ್ತೂರು ನಗರದ ಕಡೆಗೆ ಬರುತ್ತಿದ್ದ ಮೂರು ಬೈಕ್‌ಗಳಿಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ವಿರುದ್ಧ ದಿಕ್ಕಿನಿಂದ ಬಂದು ಸರಣಿಯಾಗಿ ಢಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಈ ಘಟನೆಯಲ್ಲಿ ಗಾಯಗೊಂಡಿದ್ದ 4 ಮಂದಿ ಬೈಕ್ ಪ್ರಯಾಣಿಕರ ಪೈಕಿ ಶಿವರಾಮ ಶೆಟ್ಟಿ ಮತ್ತು ಶ್ರೀಧರ ಗೌಡ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಪವನ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.