ದೀಪಕ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Update: 2018-06-20 22:00 IST
ಉಡುಪಿ, ಜೂ.20: ಪೆರ್ಡೂರು ಶೇನರಬೆಟ್ಟು ಬಳಿ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಕೊಲೆ ಪ್ರಕರಣದ ಆರೋಪಿ ದೀಪಕ್ ಹೆಗ್ಡೆ ಜಾಮೀನು ಅರ್ಜಿ ವಿಚಾರಣೆಯನ್ನು ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಜೂ.25ಕ್ಕೆ ಮುಂದೂಡಿದೆ.
ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ದೀಪಕ್ ಹೆಗ್ಡೆ ಪರ ವಕೀಲ ಅರುಣ್ ಬಂಗೇರ ಜೂ.19ರಂದು ಜಾಮೀನು ಅರ್ಜಿ ಸಲ್ಲಿಸಿದ್ದು, ಅದಕ್ಕೆ ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಆಕ್ಷೇಪಣೆ ಸಲ್ಲಿಸಲು ಜೂ.20 ರಂದು ನ್ಯಾಯಾಲಯ ಅವಕಾಶ ನೀಡಿತ್ತು.
ಇಂದು ವಿಚಾರಣೆಯ ವೇಳೆ ಶಾಂತಿ ಬಾಯಿ, ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಆರಂಭಗೊಂಡಿದ್ದು, ಅವರ ವರದಿ ಬರುವವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಅದರಂತೆ ಮುಂದಿನ ವಿಚಾರಣೆಯನ್ನು ಜೂ. 25ಕ್ಕೆ ಮುಂದೂಡಿ ನ್ಯಾಯಾಧೀಶ ವೆಂಟೇಶ್ ನಾಯ್ಕ ಆದೇಶ ನೀಡಿದರು.