ಉಡುಪಿ: ಗಾಳಿ-ಮಳೆಗೆ ಅಲ್ಲಲ್ಲಿ ಹಾನಿ
ಉಡುಪಿ, ಜೂ.20: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ನಿರಂತರ ವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿ ರುವ ಬಗ್ಗೆ ವರದಿಗಳು ಬಂದಿವೆ.
ಬೈಂದೂರು ತಾಲೂಕಿನ ಕಾಲ್ತೋಡು ಎಂಬಲ್ಲಿ ಬೇಬಿ ಶೆಟ್ಟಿ ಅವರ ಹಟ್ಟಿಕೊಟ್ಟಿಗೆ ಮಳೆಯಿಂದ ಇಂದು ಅಪರಾಹ್ನ ಭಾಗಶ: ಹಾನಿಗೊಂಡಿದ್ದು 10,000ರೂ.ನಷ್ಟ ಸಂಭವಿಸಿದೆ. ಕೆರ್ಗಾಲ್‌ನ ಶುಕ್ರ ಪೂಜಾರಿ ಎಂಬವರ ಮನೆ ಮೇಲೆ ನಿನ್ನೆ ರಾತ್ರಿ ತೆಂಗಿನಮರ ಬಿದ್ದು ಹಾನಿ ಸಂಭವಿಸಿದ್ದು 25,000ರೂ.ನಷ್ಟ ವಾಗಿದೆ.
ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಗಿರಿಜಾ ಅವರ ಪಕ್ಕಾ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ. ಬಸ್ರೂರು ಗ್ರಾಮದ ಪದ್ದು ಪೂಜಾರ್ತಿ ಮನೆಗೆ 50,000ರೂ. ಕಂದಾವರ ಗ್ರಾಮದ ಭಾಸ್ಕರ ಶೇರಿಗಾರ್ ಮನೆಗೆ 30,000 ರೂ. ನಷ್ಟವಾಗಿದೆ.
ಕಾರ್ಕಳ ತಾಲೂಕು ಕುಕ್ಕಂದೂರು ಗ್ರಾಮದ ನೇರಳೆ ಪಾಲ್ಕೆ ಮಸೀದಿ ಬಳಿಯ ನಿವಾಸಿ ಅಸ್ಮಾ ಅವರ ಮನೆಗೆ 10,000ರೂ, ಕುಚ್ಚೂರು ಗ್ರಾಮದ ಸುಜಾತ ಎಸ್.ಶೆಟ್ಟಿ ಅವರ ತೆಂಗು, ಅಡಿಕೆ ಹಾಗೂ ಬಾಳೆಗಿಡಗಳ ತೋಟಕ್ಕೆ ಹಾನಿಯಾಗಿದ್ದು 15,000ರೂ.ನಷ್ಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.