×
Ad

ಜು.6-7: ಮೂಡಬಿದರೆ ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳ

Update: 2018-06-20 22:21 IST

ಉಡುಪಿ, ಜೂ.20: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 10ನೇ ವರ್ಷದ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಜುಲೈ ತಿಂಗಳ 6 ಮತ್ತು 7ರಂದು ಮೂಡಬಿದರೆಯ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಪ್ರಗತಿಯ ಸಂಚಾಲಕ ಗುರುದತ್ತ ಸೋಮಯಾಜಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಾರಿ ಜು.6ರಂದು ಮೊದಲ ಸುತ್ತಿನ ಹಾಗೂ ಮರುದಿನ ಕೊನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಗಳು ನಡೆಯಲಿವೆ.ಗ್ರಾಮೀಣ ಸ್ತರದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚು ಒತ್ತುಕೊಟ್ಟು ನಡೆಯುವ ಈ ಉದ್ಯೋಗ ಮೇಳ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಹಾಗೂ ಕಂಪೆನಿಗಳನ್ನು ಆಕರ್ಷಿಸುತ್ತಿದೆ ಎಂದರು.

ಆಳ್ವಾಸ್ ಪ್ರಗತಿ 10ನೇ ಆವೃತ್ತಿಯಲ್ಲಿ ಐಟಿ, ಐಟಿಎಸ್, ಮೆನಿಫ್ಯಾಕ್ಚರಿಂಗ್, ಆರೋಗ್ಯಸೇವೆ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಅಟೋಮೊಬೈಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಹಾಸ್ಪಿಟಾಲಿಟಿ, ಶಿಕ್ಷಣ ಮತ್ತು ಎನ್‌ಜಿಒಗಳನ್ನು ಪ್ರತಿನಿಧಿಸುವ ದೇಶದ ಖ್ಯಾತನಾಮ ಕಂಪೆನಿಗಳು ಪಾಲ್ಗೊಳ್ಳಲಿವೆ ಎಂದರು.

ಈ ಕಂಪೆನಿಗಳು ಪದವಿ, ಸ್ನಾತಕ ಪದವಿ, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಮೂಲ ವಿಜ್ಞಾನ, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್, ಆರ್ಟ್ಸ್, ನರ್ಸಿಂಗ್, ಐಟಿಐ, ಡಿಪ್ಲೋಮಾ, ಪಿಯುಸಿ ಮತ್ತು ಎಸೆಸೆಲ್ಸಿಯೊಂದಿಗೆ ಡಿಪ್ಲೋಮಾ ವಿದ್ಯಾರ್ಹತೆಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಿವೆ ಎಂದರು.

ಈ ಬಾರಿಯ ಉದ್ಯೋಗ ಮೇಳದಲ್ಲಿ ಸುಮಾರು 200 ಕಂಪೆನಿಗಳು ಹಾಗೂ 15,000ದಿಂದ 20000 ಮಂದಿ ಉದ್ಯೋಗಾಕಾಂಕ್ಷಿಗಳು ರಾಜ್ಯದಾದ್ಯಂತದಿಂದ ಭಾಗವಹಿಸುವ ನಿರೀಕ್ಷೆ ಇದೆ ಎಂದು ಸೋಮಯಾಜಿ ತಿಳಿಸಿದರು. ಕಳೆದ ವರ್ಷ 9ನೇ ಉದ್ಯೋಗ ಮೇಳದಲ್ಲಿ 16,000 ಮಂದಿ ಪಾಲ್ಗೊಂಡಿದ್ದು ಇವರಲ್ಲಿ 1050 ಮಂದಿ ವಿವಿಧ ಕಂಪೆನಿಗಳಲ್ಲಿ ಉದ್ಯೋಗವನ್ನು ಪಡೆದಿದ್ದಾರೆ ಎಂದರು.

ದೇಶದ ಪ್ರಮುಖ ಕಂಪೆನಿಗಳಾದ ಕಿರ್ಲೋಸ್ಕರ್, ಟೊಯೊಟಾ, ಅಜೇಕ್ಸ್, ತೋಷಿಬಾ, ಮಿಟ್ಸುಬಿಷಿ, ಅಲ್‌ಕಾರ್ಗೋ ಲೋಜಿಸ್ಟಿಕ್ಸ್, ಇಂಡೋ-ಯುಸ್ ಎಂಐಎಂ ಟೆಕ್, ಕೆನೀಸ್ ಟೆಕ್ನೋಲಜಿ, ಎಲ್‌ಎಂ ವಿಂಡ್‌ಪವರ್, ಕೊಲ್ಲಿ ರಾಷ್ಟ್ರದ ಎಂಎನ್‌ಸಿ ಕಂಪೆನಿಗಳು, ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್, ಐಸಿಐಸಿಐ, ಆ್ಯಕ್ಸಿಸ್ ಅಲ್ಲದೇ ಒರೇಕಲ್, ಕೆಫೆ ಕಾಫೀಡೇ, ನಿಂಜಾ ಕಾರ್ಟ್, ಇನೋವಾ, ರೇಮಂಡ್ಸ್, ಆಸ್ಪತ್ರೆಗಳಾದ ಕೋಲಂಬಿಯಾ ಏಷ್ಯಾ ಆಸ್ಪತ್ರೆ, ಓಕ್‌ಹಾರ್ಟ್, ಅಪೋಲೊ ಹೆಲ್ತ್‌ಕೇರ್, ಟೆಲಕಾಂ ಕಂಪೆನಿಗಳಾದ ವೋಡಾಪೋನ್, ರಿಲಯನ್ಸ್, ಅಜೀಂ ಪ್ರೇಮ್‌ಜೀ ಫೌಂಡೇಷನ್, ದೇಶಪಾಂಡೆ ಪೌಂಡೇಷನ್, ಐಟಿಸಿ, ಟಿವಿಎಸ್ ಉದ್ಯೋಗ ಮೇಳದಲ್ಲಿ ಪ್ರತಿಭಾವಂತರ ತಲಾಶೆ ನಡೆಸಲಿವೆ ಎಂದು ಅವರು ವಿವರಿಸಿದರು.

ಸೂಕ್ತ ಉದ್ಯೋಗದ ತಲಾಶೆಯಲ್ಲಿರುವ ಪದವೀಧರರು, ಉದ್ಯೋಗ ಮೇಳದಲ್ಲಿ ಹೆಸರು ನೊಂದಾಯಿಸಲು ಆನ್‌ಲೈನ್‌ನಲ್ಲಿ ಜು.6ರವರೆಗೂ ಅವಕಾಶವಿದೆ. ಅಲ್ಲದೇ ಜು.6ರಂದು ಸ್ಥಳದಲ್ಲೇ ಹೆಸರು ನೊಂದಾಯಿಸಲು ಸಹ ಅವಕಾಶವಿದೆ. ಆನ್‌ಲೈನ್ ನೊಂದಾವಣಿಗೆ - alvaspragathi.com -ಗೆ ಭೇಟಿ ನೀಡಬಹುದು. ಇದೇ ವೆಬ್‌ಸೈಟ್‌ನಲ್ಲಿ ಬರುವ ಕಂಪೆನಿಗಳ ವಿವರವೂ ಲಭ್ಯವಿದೆ. ಅಲ್ಲದೇ ಅಭ್ಯರ್ಥಿಗಳಿಗೆ ಹೆಸರು ನೊಂದಾಯಿಸಲು ಅವಕಾಶವಿದೆ ಎಂದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಗಮಿಸುವಾಗ ಆನ್‌ಲೈನ್ ನೊಂದಣಿ ಮಾಡಿದವರಿಗೆ ನೀಡಲಾಗುವ ಐಡಿ, 5ರಿಂದ 10 ಅಭ್ಯರ್ಥಿಗಳ ಪಾಸ್‌ಪೋರ್ಟ್ ಗಾತ್ರದ ಪೋಟೊ, ಇತ್ತೀಚಿನ ರೆಸ್ಯೂಂ, ದೃಢೀಕರಿಸಲ್ಪಟ್ಟ ಎಲ್ಲಾ ಮಾರ್ಕ್ಸ್ ಕಾರ್ಡ್‌ಗಳ ಝೆರಾಕ್ಸ್ ಪ್ರತಿಗಳನ್ನು ತರಬೇಕು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ-9611686148/9663190590/9008907716/7892880902-ಗಳನ್ನು ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಡಾ.ಶ್ರೀನಿವಾಸ ಹೊಡೆಯಾಲ ಹಾಗೂ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News