×
Ad

94ಸಿ ಮತ್ತು 94 ಸಿಸಿ ಅರ್ಜಿ ಅವಧಿ ವಿಸ್ತರಣೆ: ಗುರುಪ್ರಸಾದ್

Update: 2018-06-20 22:25 IST

94ಸಿ ಅಡಿ ಸಲ್ಲಿಸಿದ್ದ ಅರ್ಜಿಗೆ ಮನ್ನಣೆ

94ಸಿಸಿ ಅಡಿ ಸಲ್ಲಿಸಿದ್ದ ಅರ್ಜಿಯ ಪೈಕಿ 3,981 ತಿರಸ್ಕೃತ

ಮಂಗಳೂರು, ಜೂ.20: 94ಸಿ ಮತ್ತು 94 ಸಿಸಿ ಅಡಿ ಅರ್ಜಿ ಸಲ್ಲಿಸುವ ಅವಧಿಯನ್ನು ಸೆ.16ರವರೆಗೆ ವಿಸ್ತರಿಸಲಾಗಿದೆ. ಕಾರಣಾಂತರದಿಂದ ಅರ್ಜಿ ಸಲ್ಲಿಸಲು ಬಾಕಿಯಿದ್ದವರು ಸೆ.16ರೊಳಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆಯಲ್ಲಿ ದ.ಕ.ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದರು.

ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 94ಸಿಯಲ್ಲಿ ಈವರೆಗೆ 8,076 ಅರ್ಜಿ ಸ್ವೀಕರಿಸಲಾಗಿದೆ. ಆ ಪೈಕಿ 8,061 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗಿದೆ. 15 ಅರ್ಜಿಗಳು ಪರಿಶೀಲನೆಗೆ ಬಾಕಿ ಇದೆ. ಇನ್ನು 94ಸಿಸಿಯಲ್ಲಿ 20,768 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 8364 ಹಕ್ಕುಪತ್ರ ವಿತರಿಸಲಾಗಿದೆ. 3,981 ಅರ್ಜಿಗಳನ್ನು ತಿರಸ್ಕೃರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲನೆ ನಡೆಸಿ ಶೀಘ್ರ ವಿಲೇವಾರಿಗೊಳಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.
ಕಳೆದ ಮೂರು ತಿಂಗಳಿಂದ ಯಾವುದೇ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗಿಲ್ಲ, ಜು.15ರೊಳಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಲಿದೆ ಎಂದು ಸದಸ್ಯರ ಪ್ರಶ್ನೆಯೊಂದಿಗೆ ತಹಶೀಲ್ದಾರ್ ಪ್ರತಿಕ್ರಿಯಿಸಿದರು.

ಆಧಾರ್ ತಿದ್ದುಪಡಿ ಕೇಂದ್ರ: ಜಿಲ್ಲೆಯಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಆದರೆ ಇದೀಗ ತಿದ್ದುಪಡಿಗೆ ಬರುವವರ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾಗಿ ಆಧಾರ್ ತಿದ್ದುಪಡಿಗಾಗಿ ಮತ್ತಷ್ಟು ಕೇಂದ್ರಗಳನ್ನು ತೆರೆಯಬೇಕಾದ ಅನಿವರ್ಯತೆ ಇದೆ. ಹೊಸ ಕಿಟ್‌ಗಳು ಬೇಕೆಂದು ಚುನಾವಣಾ ಪೂರ್ವದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ತಕ್ಷಣ ಆಧಾರ್ ತಿದ್ದುಪಡಿಗಾಗಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಸೀಲ್ದಾರ್ ಗುರುಪ್ರಸಾದ್ ಸ್ಪಷ್ಪಪಡಿಸಿದರು.

ಗಂಗಾ ಕಲ್ಯಾಣಕ್ಕೆ ವಿದ್ಯುತ್ ಸಂಪರ್ಕ ಇಲ್ಲ: ಗಂಜಿಮಠ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಕರೊಬ್ಬರು ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಿ, ಪಂಪ್ ಅಳವಡಿಸಿದ್ದಾರೆ. ಪಂಪ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಪಂ ಎನ್‌ಒಸಿ ನೀಡಿದ್ದರೂ, ಮೆಸ್ಕಾಂ ಸಂಪರ್ಕ ನೀಡುತ್ತಿಲ್ಲ ಎಂದು ಸದಸ್ಯ ಸುನೀಲ್ ವಿಷಯ ಪ್ರಸ್ತಾಪಿಸಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಸಿದ ಮೆಸ್ಕಾಂ ಅಧಿಕಾರಿ ಸಂಪರ್ಕ ಕಲ್ಪಿಸಲು ಮೇಲಧಿಕಾರಿಗಳು ಅವಕಾಶ ನೀಡುತ್ತಿಲ್ಲ, ತಾಪಂ ಸಭೆಯಲ್ಲಿ ನಡೆದ ಚರ್ಚೆಯ ನಿರ್ಣಯವನ್ನು ಮೇಲಧಿಕಾರಿಗಳಿಗೆ ಕಳುಹಿಸುತ್ತೇನೆ ಎಂದರು.

ಎಸ್‌ಇಜೆಡ್ ಗೇಟ್‌ಗೆ ಆಕ್ರೋಶ: ಬಾಳ-ಕಳವಾರು ಗ್ರಾಮಕ್ಕೆ ತೆರಳುವ ಸಾರ್ವಜನಿಕ ರಸ್ತೆಗೆ ಎಸ್‌ಇಜೆಡ್‌ನವರು ಗೇಟ್ ಅಳವಡಿಸಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಹಿಂದಿನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಸದಸ್ಯ ಬಶೀರ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯೆ ಶಶಿಕಲಾ ಶೆಟ್ಟಿ ಕೂಡಾ ಧ್ವನಿಗೂಡಿಸಿ ಹಲವು ವರ್ಷಗಳಿಂದಿುವ ರಸ್ತೆಗೆ ಗೇಟ್ ಅಳವಡಿಸಿರುವ ಕ್ರಮ ಸರಿಯಲ್ಲ ಎಂದರು.

ಈ ಮಧ್ಯೆ ತಾಪಂ ಇಒ ಸದಾನಂದ ‘ತಾನು ಆ ರಸ್ತೆಯಲ್ಲಿ ಹೋಗಿದ್ದು, ಯಾವುದೇ ಗೇಟ್ ಅಳವಡಿಸಿಲ್ಲ’ ಎಂದರು. ಆವಾಗ ಸದಸ್ಯರು ಇಒ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವಿಷಯಕ್ಕೆ ಸಂಬಂಧಿಸಿ ಬಿರುಸಿನ ಚರ್ಚೆ ನಡೆಯಿತಲ್ಲದೆ, ತಾನು ಶುಕ್ರವಾರ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದ ಬಳಿಕ ಸದಸ್ಯರು ತಣ್ಣಗಾದರು.

ಅಕ್ರಮ ಮರಳುಗಾರಿಕೆ : ಮಳವೂರು ವೆಂಟೆಡ್ ಡ್ಯಾಂನಿಂದ ರೈಲ್ವೇ ಓವರ್ ಟ್ರ್ಯಾಕ್‌ವರೆಗೆ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಸಂಬಂಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಗುರುಪ್ರಸಾದ್, ಮಳವೂರು ವೆಂಟೆಡ್ ಡ್ಯಾಂನಿಂದ ರೈಲ್ವೇ ಓವರ್ ಟ್ರ್ಯಾಕ್‌ವರೆಗೆ ಅಕ್ರಮ ಮರಳುಗಾರಿಕೆ ನಡೆಸದಂತೆ ಕ್ರಮ ಕೈಗೊಳ್ಳಲು ಸುರತ್ಕಲ್ ಹೋಬಳಿ ಕಂದಾಯ ನಿರೀಕ್ಷಕರು ಹಾಗೂ ಮಳವೂರು ಗ್ರಾಮಕರಣಿಕರಿಗೆ ಸೂಚಿಸಲಾಗಿದೆ. ಅಕ್ರಮ ಮರಳುಗಾರಿಕೆ ಕಂಡು ಬಂದಲ್ಲಿ ಮರಳು ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗುವುದು. ಅಲ್ಲದೆ ಗಣಿಗಾರಿಕೆ ಇಲಾಖೆ ವತಿಯಿಂದ ದಂಡ ವಿಧಿಸಲಾಗುವುದು ಎಂದು ಸ್ಪಷ್ಪಪಡಿಸಿದರು.

ಅರ್ಜಿ ಸ್ವೀಕೃತವಾಗಿಲ್ಲ: ಸೋಮೇಶ್ವರ ರೈಲ್ವೆ ಕ್ರಾಸ್ ಬಳಿ ಬೃಹತ್ ಗಾತ್ರದ ಮರಗಳಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮರ ಕಡಿಯುವಾಗ ರೈಲ್ವೇ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯವರು ತಮ್ಮ ಸ್ವಾಧೀನಕ್ಕೆ ಬರುತ್ತದೆ ಎನ್ನುತ್ತಾರೆ. ಇದರಿಂದ ಮರ ತೆರವಿಗೆ ಸಮಸ್ಯೆಯಾಗಿದೆ ಎಂದು ಸದಸ್ಯರೊಬ್ಬರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಕಾರಿ ಅಭಿಯಂತರರು, ಸೋಮೇಶ್ವರ ರೈಲ್ವೇ ಕ್ರಾಸ್ ಬಳಿಯಲ್ಲಿರುವ ರಸ್ತೆಯು ಲೋಕೋಪಯೋಗಿ ಇಲಾಖೆಯ ಮಂಗಳೂರು-ಚೆರ್ವತ್ತೂರು-ಕರಾವಳಿ ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಆದರೆ ರಸ್ತೆ ಬದಿಯ ಮರಗಳನ್ನು ಕಡಿಯಲು ಲೋಕೋಪಯೋಗಿ ಇಲಾಖೆಗೆ ಅಧಿಕಾರವಿರುವುದಿಲ್ಲ. ಅರಣ್ಯ ಇಲಾಖೆ ವತಿಯಿಂದ ಮರಗಳನ್ನು ಕಡಿಯುವ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಮಂಗಳೂರು ವಲಯ ಅರಣ್ಯಾಧಿಕಾರಿಯವರು ಪ್ರತಿಕ್ರಿಯಿಸಿ, ಈವರೆಗೆ ಸಂಬಂಧಪಟ್ಟ ಇಲಾಖೆಯಿಂದ ನಮಗೆ ಯಾವುದೇ ಅರ್ಜಿ ಬಂದಿಲ್ಲ. ರೈಲ್ವೇ ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿದ್ದ ಮರವನ್ನು ಕಡಿಯಲು ರೈಲ್ವೆ ಇಲಾಖೆಯವರು ಅಥವಾ ರೈಲ್ವೆ ಇಲಾಖೆಯಿಂದ ಗುತ್ತಿಗೆ ಪಡೆದು ಒಡಂಬಡಿಕೆ ಮಾಡಿಕೊಂಡ ಗುತ್ತಿಗೆದಾರರಿಂದ ಅರ್ಜಿ ಬಂದಲ್ಲಿ ಮರ ಕಡಿಯುವ ಆದೇಶವನ್ನು ಅರ್ಜಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಬೇರೆ ಇಲಾಖಾ ಸ್ಥಳಗಳಲ್ಲಿರುವ ಅಪಾಯಕಾರಿ ಮರಗಳನ್ನು ಸಂಬಂಧಪಟ್ಟ ಇಲಾಖೆಯವರೇ ಗುರುತಿಸಿ ಅರ್ಜಿ ಸಲ್ಲಿಸಬೇಕಾಗಿದೆ ಎಂದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೀಟಾ ನರೋನ್ಹ, ಜಿಪಂ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಯು.ಪಿ. ಇಬ್ರಾಹಿಂ, ಜನಾರ್ದನ ಗೌಡ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News