ಮೂಡುಬಿದಿರೆ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ

Update: 2018-06-20 17:12 GMT

ಮೂಡುಬಿದಿರೆ, ಜೂ.20: ಶಾಸಕ ಉಮಾನಾಥ ಕೋಟ್ಯಾನ್ ಶಾಸಕರಾಗಿ ಮೊದಲ ಬಾರಿಗೆ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆ ಬಳಿಕ ರೋಗಿಗಳನ್ನು ಭೇಟಿಯಾಗಿ ಯೋಗ ಕ್ಷೇಮವನ್ನು ವಿಚಾರಿಸಿದರು.

ನಂತರ ಪುರಸಭಾ ಅಧಿಕಾರಿಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿನ ಸ್ವಚ್ಚತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವೈದ್ಯಾಧಿಕಾರಿಗಳ ಜೊತೆಗೆ ಚರ್ಚಿಸಿದ ಅವರು ಮೂಡುಬಿದಿರೆ ಪರಿಸರದಲ್ಲಿ ಡೆಂಗ್ಯೂ ಜ್ವರ ಶಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದು ಈ ಬಗ್ಗೆ ಸುರಕ್ಷತಾ ಹಾಗೂ ಮುಂಜಾಗ್ರತಾ ಕ್ರಮಗಳನ್ನು ನಾವೆಲ್ಲರೂ ಸೇರಿ ತೆಗೆದುಕೊಳ್ಳಬೇಕು. ಸಂಬಂಧಿತ ಅಧಿಕಾರಿಗಳು ಸೂಚಿತ ಸಮಯದಲ್ಲಿ ಪ್ರಾಮಾಣಿಕವಾಗಿ ದುಡಿಯಬೇಕೆಂದು ಸಲಹೆ ನೀಡಿದರು.

ಆರೋಗ್ಯ ಕೇಂದ್ರದ ಅಧಿಕಾರಿಗಳು ಆ್ಯಂಬುಲೆನ್ಸ್ ಹಾಗೂ ಇತರ ಸೌಲಭ್ಯಗಳ ಕೊರತೆಯ ಬಗ್ಗೆ ಶಾಸಕರಲ್ಲಿ ಮನವಿ ನೀಡಿದಾಗ ಈ ಬಗ್ಗೆ ಮಾತನಾಡಿದ ಅವರು ಮೂಡುಬಿದಿರೆ ತಾಲೂಕಾಗಿ ಘೋಷಣೆಯಾಗಿದ್ದು ಆರೋಗ್ಯಕೇಂದ್ರದಲ್ಲಿ 100 ಬೆಡ್ ನ ವ್ಯವಸ್ಥೆ ಹಾಗೂ ಕೊರತೆಯಿರುವ ವೈದ್ಯರ ನೇಮಕಾತಿಗೆ ಪ್ರಯತ್ನಿಸಲಾಗುವುದು, ಆರೋಗ್ಯ ಕೇಂದ್ರದ ಸೌಲಭ್ಯವನ್ನು ಎಲ್ಲರೂ ಬಳಸುವಂತಾಗಬೇಕು, ಇಲ್ಲಿನ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ನಡೆಸಲಾಗುವುದು ಮಾತ್ರವಲ್ಲದೆ ಪ್ರತಿ 15 ದಿನಕ್ಕೊಮ್ಮೆ ಕೇಂದ್ರಕ್ಕೆ ಭೇಟಿ ನೀಡುವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರಾದ ಬಾಹುಬಲಿ ಪ್ರಸಾದ್, ನಾಗರಾಜ್, ಪ್ರಸಾದ್, ಹನೀಫ್ ಅಲಂಗಾರು, ಹಿರಿಯ ವಕೀಲ ಕೆ.ಆರ್ ಪಂಡಿತ್, ಉದ್ಯಮಿ ಮೇಘನಾದ ಶೆಟ್ಟಿ, ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ, ಡಾ.ಜ್ಞಾನೇಶ್, ಪುರಸಭಾ ಪರಿಸರ ಅಭಿಯಂತರೆ ಶಿಲ್ಪಾ ಮತ್ತಿತ್ತರರು ಉಪಸ್ಥಿತರಿದ್ದರು. ಇದೇ ವೇಳೆಗೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಶಂಕಿತ ಡೆಂಗ್ಯೂಜ್ವರ ಪೀಡಿತ ರೋಗಿಗಳನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು.

ವೈದ್ಯಾಧಿಕಾರಿ ಗೈರು : ಶಾಸಕ ಘರಂ
ಮೂಡುಬಿದಿರೆ ಭೇಟಿಯ ಬಗ್ಗೆ ನಾನು ಈಗಾಗಗಲೇ ತಿಳಿಸಿದ್ದರೂ ಅಧಿಕಾರಿ ಗೈರಾಗಿದ್ದಾರೆ ಎಂದು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿ ಶಾಸಕರು ಬರುವಾಗ ಈ ಅಧಿಕಾರಿಗಳು ಈ ರೀತಿಯಾಗಿ ತಪ್ಪಿಸಿಕೊಂಡರೆ ನಾವು ಮಾಹಿತಿ ಯಾರಿಂದ ಪಡೆಯುವುದು? ಕೂಡಲೇ ಅವರು ತನ್ನನ್ನು ಭೇಟಿಯಾಗಬೇಕೆಂದು ಶಾಸಕ ಉಮಾನಾಥ ಕೋಟ್ಯಾನ್ ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News