ಹಿಂದೂ-ಮುಸ್ಲಿಂ ದಂಪತಿಯ ಅರ್ಜಿ ತಿರಸ್ಕರಿಸಿ ಅವಮಾನಿಸಿದ ಪಾಸ್‌ಪೋರ್ಟ್ ಅಧಿಕಾರಿ !

Update: 2018-06-20 18:06 GMT

ಲಕ್ನೋ, ಜೂ. 20: ಪಾಸ್‌ಪೋರ್ಟ್ ಅಧಿಕಾರಿಯೊಬ್ಬರು ಅಂತರ್-ಧರ್ಮೀಯ ದಂಪತಿ ಸಲ್ಲಿಸಿದ ಪಾಸ್ ಪೋರ್ಟ್ ಅರ್ಜಿ ತಿರಸ್ಕರಿಸಿ ಅವಮಾನಿಸಿದ ಘಟನೆ ಲಕ್ನೋದಲ್ಲಿ ಬುಧವಾರ ನಡೆದಿದೆ. ತಮಗೆ ಉಂಟಾದ ತೊಂದರೆ ಬಗ್ಗೆ ದಂಪತಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಪ್ರಧಾನಿ ಕಚೇರಿಗೆ ಟ್ವೀಟ್ ಮಾಡಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.

ಮುಹಮ್ಮದ್ ಅನಸ್ ಸಿದ್ದೀಕಿ ಅವರು ತನ್ವಿ ಎಂಬವರನ್ನು 2007ರಲ್ಲಿ ಲಕ್ನೋದಲ್ಲಿ ವಿವಾಹವಾಗಿದ್ದರು. ಅವರಿಗೆ 6 ವರ್ಷದ ಪುತ್ರಿ ಇದ್ದಾಳೆ. ಅವರು ಪಾಸ್‌ಪೋರ್ಟ್‌ಗಾಗಿ ಜೂನ್ 19ರಂದು ಅರ್ಜಿ ಸಲ್ಲಿಸಿದ್ದರು. ಲಕ್ನೋದಲ್ಲಿರುವ ಪಾಸ್‌ಪೋರ್ಟ್ ಕಚೇರಿಯಲ್ಲಿ ಭೇಟಿಗೆ ಜೂನ್ 20ರಂದು ಅವಕಾಶ ನೀಡಲಾಗಿತ್ತು.

ಭೇಟಿಯ ದಿನ ಕೌಂಟರ್ ಎ ಹಾಗೂ ಬಿಯಲ್ಲಿ ನಡೆದ ಮೊದಲು ಎರಡು ಹಂತದ ಸಂವಹನವನ್ನು ದಂಪತಿ ಪೂರ್ಣಗೊಳಿಸಿದ್ದರು. ಆದರೆ, ಕೌಂಟರ್ ಸಿಯಲ್ಲಿ ಸಂವಹನ ನಡೆಸಿದ ಅಧಿಕಾರಿಯಿಂದ ಸಮಸ್ಯೆ ಆರಂಭವಾಯಿತು. “ನನಗಿಂತ ಮೊದಲು ನನ್ನ ಪತ್ನಿ ಕೌಂಟರ್ ಸಿ5 ತಲುಪಿದರು. ಅಲ್ಲಿದ್ದ ವಿಕಾಸ್ ಮಿಶ್ರಾ ಹೆಸರಿನ ಅಧಿಕಾರಿ ಆಕೆಯ ದಾಖಲೆಗಳನ್ನು ಪರಿಶೀಲಿಸಿದರು. ಪತಿಯ ಹೆಸರನ್ನು ಮುಹಮ್ಮದ್ ಅನಸ್ ಸಿದ್ದೀಕಿ ಎಂದು ಓದಿದ ಬಳಿಕ ಅವರ ನನ್ನ ಪತ್ನಿಯನ್ನು ಗದರಿಸಿದರು ಹಾಗೂ ನನ್ನನ್ನು ವಿವಾಹವಾಗಿಲ್ಲ ಎಂದು ಹೇಳಿದರು. ಅನಂತರ ಅವರು ಹೆಸರು ಬದಲಾಯಿಸಿ ತಿದ್ದುಪಡಿ ಮಾಡಲಾದ ಎಲ್ಲ ದಾಖಲೆಗಳನ್ನು ತರುವಂತೆ ನನ್ನ ಪತ್ನಿಗೆ ತಿಳಿಸಿದರು” ಎಂದು ಸಿದ್ದೀಖಿ ಹೇಳಿದ್ದಾರೆ. “ನಾವು ಹೆಸರು ಬದಲಾವಣೆ ಮಾಡುವುದಿಲ್ಲ. ಹೆಸರಿನ ಕುರಿತು ನಮ್ಮ ಕುಟುಂಬಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ನನ್ನ ಪತ್ನಿ ತಿಳಿಸಿದ್ದರು. ಅನಂತರ ಪಾಸ್‌ಪೋರ್ಟ್ ಅಧಿಕಾರಿ ದಾಖಲೆಗಳನ್ನು ಎಪಿಒ ಕಚೇರಿಗೆ ಕಳುಹಿಸುವುದಾಗಿ ಹಾಗೂ ಅಲ್ಲಿಗೆ ತೆರಳುವಂತೆ ಸೂಚಿಸಿದ್ದರು. ಬಳಿಕ ಆ ಅಧಿಕಾರಿ ನನಗೆ ಕರೆ ಮಾಡಿ ಅವಮಾನ ಮಾಡಿದರು. ಹಿಂದೂ ಧರ್ಮಕ್ಕೆ ಮತಾಂತರವಾಗದೇ ಇದ್ದರೆ ನನ್ನ ವಿವಾಹದ ದಾಖಲೆ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು ಎಂದು ಸಿದ್ದೀಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News