ಈ ಮಾಜಿ ಚಾಂಪಿಯನ್ ಆಗಲಿದೆ ಈ ಬಾರಿಯ ಫಿಫಾ ಚಾಂಪಿಯನ್ !

Update: 2018-06-20 17:46 GMT

2010 ರ ಫಿಫಾ ವಿಶ್ವಕಪ್ ನಡೆಯುವಾಗ ವಿಶ್ವಕಪ್ ಗಿಂತ ಹೆಚ್ಚು ಖ್ಯಾತಿ ಪಡೆದ ಪೌಲ್ ಹೆಸರಿನ ಆಕ್ಟೊಪಸ್ ಗೊತ್ತಲ್ಲವೇ ? ವಿಶ್ವಕಪ್ ಯಾರು ಗೆಲ್ಲುತ್ತಾರೆ ಎಂದು ಜನರು ಮೈದಾನ ನೋಡಿದ್ದಕ್ಕಿಂತ ಹೆಚ್ಚು ಈ ಆಕ್ಟೊಪಸ್ ಅನ್ನೇ ನೋಡಿದರು. ಎರಡು ಪೆಟ್ಟಿಗೆಗಳಲ್ಲಿ ಆಹಾರ ಮತ್ತು ಸ್ಪರ್ಧಿಸುವ ಎರಡು ತಂಡಗಳ ಧ್ವಜ ಇಟ್ಟು ಪೌಲ್ ಗೆ ತೋರಿಸಲಾಗುತ್ತಿತ್ತು. ಅದು ಯಾವ ಪೆಟ್ಟಿಗೆಯ ಆಹಾರವನ್ನು ಮೊದಲು ಮುಟ್ಟುತ್ತಿತ್ತು ಅದೇ ತಂಡ ಗೆಲ್ಲುತ್ತದೆ ಎಂದು ಹೇಳಲಾಗುತ್ತಿತ್ತು. ಕೊನೆಗೆ ಪೌಲ್ ತೋರಿಸಿದ 14 ರಲ್ಲಿ 12 ಫಲಿತಾಂಶ ಸರಿಯಾಯಿತು. ಹಾಗಾಗಿ ಪೌಲ್ ಫುಲ್ ಹಿಟ್ ಆಯಿತು. 

ಈಗ ಆಕ್ಟೊಪಸ್ ಜಾಗದಲ್ಲಿ ಕಂಪ್ಯೂಟರ್ ಬಂದಿದೆ. ಖ್ಯಾತ ಜಾಗತಿಕ ಬಂಡವಾಳ ಹೂಡಿಕೆ ನಿರ್ವಹಣಾ ಕಂಪೆನಿ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಕಂಪ್ಯೂಟರ್ ಆಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಮೂಲಕ ಸಮಗ್ರ ಲೆಕ್ಕಾಚಾರ ಹಾಕಿ ಈ ಬಾರಿ ಇಂತಹದೇ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳಿದೆ! ಆ ಲೆಕ್ಕಾಚಾರದ ಪ್ರಕಾರ ಈ ಬಾರಿ ಜಾಗತಿಕ ಫುಟ್ಬಾಲ್ ಕಿರೀಟ್ ಧರಿಸುವುದು ಈ ಹಿಂದಿನ ಚಾಂಪಿಯನ್, ಹಾಲಿ ಸ್ವಲ್ಪ ಮಂಕಾದಂತೆ ಕಂಡು ಬರುತ್ತಿರುವ ಬ್ರೆಝಿಲ್ !

ಹೌದು, ಗೋಲ್ಡ್ ಮ್ಯಾನ್ ಸ್ಯಾಕ್ಸ್ ಪ್ರಕಾರ ಈ ಬಾರಿ ವಿಶ್ವಕಪ್ ಗೆಲ್ಲುವುದು ಬ್ರೆಝಿಲ್. ಮಾತ್ರವಲ್ಲ ಅದು ಈ ಬಾರಿ ಪ್ರತಿ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ? ಕ್ವಾರ್ಟರ್ ಫೈನಲ್, ಸೆಮಿ ಫೈನಲ್ ಹಂತಕ್ಕೆ ಯಾರು ತಲುಪುತ್ತಾರೆ ಎಂಬಿತ್ಯಾದಿ ಊಹೆಗಳನ್ನು ಮುಂದಿಟ್ಟಿದೆ. ಅದರ ಪ್ರಕಾರ  ಸೆಮಿಫೈನಲ್ ನಲ್ಲಿ ಜರ್ಮನಿ ಪೋರ್ಚುಗಲ್ ಅನ್ನು ಸೋಲಿಸುತ್ತದೆ. ಸ್ಪೇನ್ ಮತ್ತು ಅರ್ಜೆಂಟಿನಾ ಕ್ವಾರ್ಟರ್ ಫೈನಲ್ ನಲ್ಲೇ ಮುಗ್ಗರಿಸುತ್ತವೆ. 

ಇಷ್ಟೆಲ್ಲಾ ಹೇಳಿದ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಕೊನೆಗೊಂದು ನಿರೀಕ್ಷಣಾ ಜಾಮೀನನ್ನು ತೆಗೆದುಕೊಂಡಿದೆ. ಅದೇನೆಂದರೆ, ಫುಟ್ಬಾಲ್ ನಲ್ಲಿ ಏನೂ ಆಗಬಹುದು. ಇಲ್ಲಿ ಎಲ್ಲವೂ ಅತ್ಯಂತ ಅನಿರೀಕ್ಷಿತ, ಅಚ್ಚರಿ. ಹಾಗಾಗಿ ಕೊನೆಗೆ ಏನು ಬೇಕಾದರೂ ಆಗಬಹುದು ಎಂದು ಹೇಳಿ ಕೈತೊಳೆದುಕೊಂಡಿದೆ. 
ಸುಮಾರು ಒಂದು ತಿಂಗಳು ಫುಟ್ಬಾಲ್ ವಿಶ್ವಕಪ್ ನಡೆಯಲಿದೆ. ಎಲ್ಲವನ್ನೂ ಕಂಪ್ಯೂಟರ್ ನಿರ್ಧರಿಸುವುದಾದರೆ ಆಟಗಾರರು ಏನು ಮಾಡುತ್ತಾರೆ ? ಯಾವುದಕ್ಕೂ ಕಾದು ನೋಡೋಣ! ಏನಂತೀರಿ ? 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News