ನೋಟ್ ಬ್ಯಾನ್ ನಂತರ ಅತೀ ಹೆಚ್ಚು ಹಳೆ ನೋಟುಗಳು ಜಮೆಯಾದದ್ದು ಅಮಿತ್ ಶಾ ನಿರ್ದೇಶಕರಾಗಿರುವ ಬ್ಯಾಂಕ್ ನಲ್ಲಿ

Update: 2018-06-21 16:37 GMT

#ಕೇವಲ 5 ದಿನಗಳಲ್ಲಿ 745 ಕೋಟಿ ರೂ. ಜಮೆ!

ಹೊಸದಿಲ್ಲಿ, ಜೂ.21: ನವೆಂಬರ್ 8, 2016ರಂದು ನೋಟು ಅಮಾನ್ಯಗೊಂಡ ನಂತರ ಹಳೆಯ 500 ಹಾಗು 1000 ರೂ. ನೋಟುಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ ಗಳ ಪೈಕಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಜಮೆಯಾಗಿದೆ ಎಂದು ಆರ್ ಟಿಐ ವರದಿಯಿಂದ ಬಹಿರಂಗಗೊಂಡಿದೆ ಎಂದು ಐಎಎನ್ ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಬಗ್ಗೆ ಮುಂಬೈನ ಕಾರ್ಯಕರ್ತರೊಬ್ಬರು ಅರ್ಜಿ ಸಲ್ಲಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ನಿರ್ಧಾರ ಘೋಷಿಸಿದ ಕೇವಲ ಐದೇ ದಿನಗಳಲ್ಲಿ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ 745.59 ಕೋಟಿ ರೂ.ಗಳು ಜಮೆಯಾಗಿದೆ. ನೋಟ್ ಅಮಾನ್ಯ ನಿರ್ಧಾರ ಘೋಷಣೆಯಾದ ಕೆಲ ದಿನಗಳಲ್ಲಿ ಅಂದರೆ ನವೆಂಬರ್ 14ರ ನಂತರ ಜಿಲ್ಲಾ ಸಹಕಾರಿ ಬ್ಯಾಂಕ್ ಗಳು ಅಮಾನ್ಯಗೊಂಡ ನೋಟುಗಳನ್ನು ಸ್ವೀಕರಿಸುವುದನ್ನು ನಿಷೇಧಿಸಲಾಯಿತು.

ಅಮಿತ್ ಶಾ ಅವರೇ ಬ್ಯಾಂಕ್ ನಿರ್ದೇಶಕರಾಗಿದ್ದಾರೆ ಎಂದು ಬ್ಯಾಂಕ್ ವೆಬ್ ಸೈಟ್ ತಿಳಿಸುತ್ತದೆ. 2000ದಲ್ಲಿ ಅವರು ಬ್ಯಾಂಕ್ ಚೇರ್ ಮೆನ್ ಆಗಿದ್ದರು. 2017ರ ಮಾರ್ಚ್ 31ರ ವೇಳೆಗೆ ಅಹ್ಮದಾಬಾದ್ ಜಿಲ್ಲಾ ಬ್ಯಾಂಕ್ ನ ಡೆಪಾಸಿಟ್ 5.050 ಕೋಟಿ ರೂ.ಗಳಾಗಿದ್ದು, 2016-17ರಲ್ಲಿ ಬ್ಯಾಂಕ್ ನ ನಿವ್ವಳ ಲಾಭ 14.31 ಕೋಟಿ ರೂ.ಗಳಾಗಿದೆ.

ಅಹ್ಮದಾಬಾದ್ ಬ್ಯಾಂಕ್ ನ ನಂತರದ ಸ್ಥಾನದಲ್ಲಿರುವ ರಾಜ್ ಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಗೆ 693.19 ಕೋಟಿ ರೂ.ಗಳು ಜಮೆಯಾಗಿದ್ದು, ಗುಜರಾತ್ ಸಿಎಂ ವಿಜಯ್ ರೂಪಾನಿ ಸಂಪುಟದ ಸಚಿವರಾಗಿರುವ ಜಯೇಶ್ ಭಾಯ್ ವಿಠಲ್ ಭಾಯ್ ರಾದಾದಿಯಾ ಇದರ ಚೇರ್ ಮೆನ್ ಆಗಿದ್ದಾರೆ. ಕುತೂಹಲದ ವಿಚಾರವೆಂದರೆ ರಾಜ್ ಕೋಟ್ ಗುಜರಾತ್ ಬಿಜೆಪಿ ರಾಜಕೀಯ ಪ್ರಮುಖ ಕೇಂದ್ರವಾಗಿದೆ. 2001ರಲ್ಲಿ ಪ್ರಧಾನಿ ಮೋದಿ ಪ್ರಥಮ ಬಾರಿಗೆ ಇಲ್ಲಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದರು. ರಾಜ್ ಕೋಟ್ ಸಹಕಾರಿ ಬ್ಯಾಂಕ್ ಜಮೆಯಾದ ಮೊತ್ತವು ಗುಜರಾತ್ ರಾಜ್ಯ ಸಹಕಾರಿ ಬ್ಯಾಂಕ್ ಗಿಂತಲೂ ಅಧಿಕವಾಗಿದ್ದು, ರಾಜ್ಯ ಸಹಕಾರಿ ಬ್ಯಾಂಕ್ ಗೆ ಕೇವಲ 1.11 ಕೋಟಿ ರೂ. ಜಮೆಯಾಗಿತ್ತು ಎನ್ನುವುದೂ ವರದಿಯಿಂದ ಬಹಿರಂಗಗೊಂಡಿದೆ.

"ನಗದು ನಿಷೇಧಿಸಿದ ಬಳಿಕ ರಾಜ್ಯ ಸಹಕಾರಿ ಬ್ಯಾಂಕ್‌ಗಳು (ಎಸ್‌ಸಿಬಿಗಳು) ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ (ಡಿಸಿಸಿಬಿಗಳು)ಲ್ಲಿ ಜಮೆಯಾದ ಮೊತ್ತವನ್ನು ಆರ್‌ಟಿಐ ಮೊದಲ ಬಾರಿಗೆ ಬಹಿರಂಗಗೊಳಿಸಿ ದಿಗ್ಭ್ರಮೆ ಉಂಟು ಮಾಡಿದೆ’’ಎಂದು ಈ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಆರ್‌ಟಿಐ ಕಾರ್ಯಕರ್ತ ಮನೋಹರಂಜನ್ ಎಸ್. ರಾಯ್ ಹೇಳಿದ್ದಾರೆ.

ಈ ಆರ್‌ಟಿಐ ಮಾಹಿತಿಯನ್ನು ನಬಾರ್ಡ್‌ನ ಚೀಫ್ ಜನರಲ್ ಮ್ಯಾನೇಜರ್ ಹಾಗೂ ಮೇಲ್ಮನವಿ ಪ್ರಾಧಿಕಾರ ಎಸ್. ಸರವಣವೇಲ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News