×
Ad

ತುಳು ಚಲನಚಿತ್ರನಟ ಸುರೇಂದ್ರ ಭಂಡಾರಿ ಸಹಿತ ಮೂವರು ಆರೋಪಿಗಳ ಬಂಧನ

Update: 2018-06-21 20:08 IST
ಸುರೇಂದ್ರ ಭಂಡಾರಿ, ಸತೀಶ್ ಕುಲಾಲ್, ಪೃಥ್ವಿರಾಜ್

ಬಂಟ್ವಾಳ, ಜೂ. 21: ಕಳೆದ ವಾರ ಬಂಟ್ವಾಳದ ಬಡ್ಡೆಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಹಾಗೂ ಬಂಟ್ವಾಳ ಪೊಲೀಸರ ತಂಡ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರ ಭಂಡಾರಿ (37), ಸತೀಶ್ ಕುಲಾಲ್ (37) ಎಂಬವರನ್ನು ಖಚಿತ ಮಾಹಿತಿಯ ಮೇರೆಗೆ ಮಂಗಳೂರಿನ ಪಚ್ಚಿನಡ್ಕ ಎಂಬಲ್ಲಿ ಬಂಧಿಸಿದ್ದಾರೆ.

ಅದೇ ರೀತಿ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಮತ್ತೋರ್ವ ಆರೋಪಿ ಪೃಥ್ವಿರಾಜ್ ಜೆ. ಶೆಟ್ಟಿ (35) ಎಂಬಾತನನ್ನು ಕೇರಳದ ಕುಂಬ್ಳೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ

ಜೂ.11ರಂದು ತುಳು ಚಲನಚಿತ್ರ ನಟ ಸುರೇಂದ್ರ ಭಂಡಾರಿ ನೇತೃತ್ವದ ತಂಡವೊಂದು ಬಂಟ್ವಾಳದ ಬಡ್ಡೆಕಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರಾದ ಮಾಣಿ ಗ್ರಾಮ ಪಂಚಾಯತ್ ಸದಸ್ಯ ಗಣೇಶ್ ರೈ ಮಾಣಿ, ಪುಷ್ಪರಾಜ್ ಞಎಂಬವರ ಮೇಲೆ ಹಲ್ಲೆಗೈದು ತದನಂತರ ತಲವಾರು ಮೂಲಕ ಕೊಲೆಗೆ ಯತ್ನ ನಡೆಸಿತ್ತು. ತಲವಾರು ಹಿಡಿದು ಅವಾಚ್ಯ ಶಬ್ದಗಳಿಂದ ಬೈಯುವ ಹಾಗೂ ಹಲ್ಲೆ ನಡೆಸುವ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರಿಸಿದ್ದು, ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಕಾರ್ಯಾಚರಣೆಯಲ್ಲಿ ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಡಿಸಿಐಬಿ ಸುನೀಲ್ ನಾಯಕ್, ಬಂಟ್ವಾಳ ಪಿಎಸ್ಸೈಗಳಾದ ಚಂದ್ರಶೇಖರ್, ಹರೀಶ್, ಯಲ್ಲಪ್ಪ, ಪ್ರಸನ್ನ, ಡಿಸಿಐಬಿಗಳಾದ ಉದಯ್ ರೈ, ಪ್ರವೀಣ್, ಇಕ್ಬಾಲ್ ಹಾಗೂ ಸಿಬ್ಬಂದಿಗಳಾದ ಗಿರೀಶ್, ಮುರುಗೇಶ್, ನಝೀರ್, ಉಮೇಶ್, ಕುಮಾರ್, ಮಲ್ಲಿಕ್ ಸಾಬ್, ಧನ್ಯಾ, ಪ್ರಶಾಂತ್, ಕೇದಾರ, ಹನುಮಂತು, ದಿವಾಕರ್ ಪಾಲ್ಗೊಂಡಿದ್ದರು.

ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿ ಹಾಗೂ ತಂಡಕ್ಕೆ ಬಹುಮಾನವನ್ನು ಘೋಷಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News