ಜಾಗತಿಕ ಮಾರುಕಟ್ಟೆಗೆ ಕೆಫ್ ಇನ್ಫ್ರಾ: ಕ್ಯಾಟರ ಜೊತೆ ವಿಲೀನ

Update: 2018-06-21 15:05 GMT
ಫೈಝಲ್-ಶಬಾನ ದಂಪತಿ

ಕ್ಯಾಲಿಫೋರ್ನಿಯ, ಜೂ. 21: ಕಟ್ಟಡದ ವಿನ್ಯಾಸ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ತಂತ್ರಜ್ಞಾನ ಕಂಪೆನಿ ‘ಕ್ಯಾಟರ’ ಮತ್ತು ಉತ್ಪಾದನೆ ತಂತ್ರಜ್ಞಾನ ಪರಿಣತ ಕಂಪೆನಿ ‘ಕೆಇಎಫ್ ಇನ್ಫ್ರಾ’ ವಿಲೀನವಾಗಿವೆ. ಈ ಮೂಲಕ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿರುವುದಾಗಿ ಹಾಗೂ ಉತ್ಪಾದನಾ ಸಾಮರ್ಥ್ಯ ಮತ್ತು ಮಾರುಕಟ್ಟೆ ಪರಿಣತಿಯನ್ನು ಹೆಚ್ಚಿಸಿರುವುದಾಗಿ ಈ ಕಂಪೆನಿಗಳು ಹೇಳಿವೆ.

ಇನ್ನು ಮುಂದೆ ಈ ಕಂಪೆನಿಗಳು ‘ಕೆಇಎಫ್ ಕ್ಯಾಟರ’ ಎಂಬ ಹೆಸರಿನಿಂದ ಭಾರತ ಮತ್ತು ಮಧ್ಯಪ್ರಾಚ್ಯದ ಮಾರುಕಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿವೆ. ಈ ಕಂಪೆನಿಗಳು ಅತ್ಯಾಧುನಿಕ ತಂತ್ರಜ್ಞಾನದಿಂದ ಪ್ರಿಕಾಸ್ಟ್ ನಿರ್ಮಾಣದ ಮೂಲಕ ಕಟ್ಟಡಗಳ ನಿರ್ಮಾಣದಲ್ಲಿ ಸಮಯದ ಉಳಿತಾಯದ ಜೊತೆ ಉತ್ಕೃಷ್ಟ ಗುಣಮಟ್ಟ ನೀಡಲು ಜೊತೆಯಾಗಿ ಕೆಲಸ ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ. 

ಮನೆ ನಿರ್ಮಾಣ ಕಾರ್ಯದಲ್ಲಿ ಮುಖ್ಯವಾಗಿ ತೊಡಗುವ ಕೆಇಎಫ್ ಕ್ಯಾಟರ, ಆಸ್ಪತ್ರೆಗಳು ಮತ್ತು ಶಾಲೆಗಳು ಮುಂತಾದ ಅಗತ್ಯ ಮೂಲಸೌಕರ್ಯ ನಿರ್ಮಾಣದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ. 

2014ರಲ್ಲಿ ಕೇರಳದ ಫೈಝಲ್ ಕೊಟ್ಟಿಕೊಲ್ಲನ್ ಮತ್ತು ಅವರ ಪತ್ನಿ ಮಂಗಳೂರಿನ ಶಬನಾ ಫೈಝಲ್ ಸ್ಥಾಪಸಿರುವ ಕೆಇಎಫ್ ಇನ್ಫ್ರಾ. ಇದು ಉನ್ನತ ಗುಣಮಟ್ಟದ ಕಟ್ಟಡಗಳನ್ನು ಕ್ಷಿಪ್ರವಾಗಿ ಮತ್ತು ದಕ್ಷತೆಯಿಂದ ನಿರ್ಮಿಸಲು ರೊಬೊಟಿಕ್ಸ್ ಮತ್ತು ಆಟೊಮೇಶನ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತಿದೆ. ಅದು ಭಾರತ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಗಳಿಗಾಗಿ ಪ್ರಿಕಾಸ್ಟ್ ಕಾಂಕ್ರೀಟ್, ಪ್ರಿಫ್ಯಾಬ್ರಿಕೇಟಡ್ ಬಾತ್‌ರೂಮ್ ಪಾಡ್‌ಗಳು, ಪೀಠೋಪಕರಣಗಳು, ಅಲ್ಯುಮಿನಿಯಂ ಮತ್ತು ಗ್ಲೇಝಿಂಗ್ ಉತ್ಪನ್ನಗಳನ್ನು ನಿರ್ಮಿಸುತ್ತದೆ. ಪ್ರಿಕಾಸ್ಟ್ ನಿರ್ಮಾಣ ರಂಗದಲ್ಲಿ ಸದ್ಯ ಅತ್ಯಂತ ಮುಂಚೂಣಿಯಲ್ಲಿರುವ ಕಂಪೆನಿ ಕೆಎಫ್ ಇನ್ಫ್ರಾ. ಶಬನಾ ಮಂಗಳೂರಿನ ಖ್ಯಾತ ಉದ್ಯಮಿ, ಸಾಮಾಜಿಕ ಮುಂದಾಳು ಬಿ ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರ ಪುತ್ರಿ. 

1400 ಉದ್ಯೋಗಿಗಳಿರುವ ಕೆಇಎಫ್ ಇನ್ಫ್ರಾ ತಮಿಳುನಾಡಿನ ಕೃಷ್ಣಗಿರಿ ಮತ್ತು ಉತ್ತರಪ್ರದೇಶದ ಲಕ್ನೋದಲ್ಲಿ ಬೃಹತ್  ಕಾರ್ಖಾನೆಗಳನ್ನು ಹೊಂದಿದೆ. 2000 ಉದ್ಯೋಗಿಗಳಿರುವ ಕ್ಯಾಟರ ಅಮೆರಿಕದ ಗ್ರೇಟರ್ ಫೀನಿಕ್ಸ್, ಆ್ಯರಿಝೋನ ಮತ್ತು ಚೀನಾದ ಶಾಂಘೈಗಳಲ್ಲಿ ಕಾರ್ಖಾನೆಗಳನ್ನು ಹೊಂದಿದೆ. ಇನ್ನೂ ಎರಡು ಕಾರ್ಖಾನೆಗಳು ಅಮೇರಿಕಾದಲ್ಲಿ ನಿರ್ಮಾಣ ಹಂತದಲ್ಲಿವೆ. 

ವಿಲೀನದ ಬಳಿಕ, ಈ ಕಂಪೆನಿಗಳಿಗೆ ಜಗತ್ತಿನಾದ್ಯಂತ 20 ಕಚೇರಿಗಳು ಮತ್ತು 3,400 ಉದ್ಯೋಗಿಗಳು ಇರುವರು. 

ಇಂದಿರಾ ಕ್ಯಾಂಟೀನ್ ನಿರ್ಮಿಸಿದ ಕಂಪೆನಿ !

ಸಿದ್ದರಾಮಯ್ಯ ಸರಕಾರದ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದು ಇದೇ ಕೆಎಫ್ ಇನ್ಫ್ರಾ ಸಂಸ್ಥೆ. ಬೆಂಗಳೂರು ಹಾಗು ರಾಜ್ಯದ ವಿವಿಧೆಡೆಗಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ, ಸೀಮಿತ ಸ್ಥಳಾವಕಾಶದಲ್ಲಿ ಸುಂದರ ಕ್ಯಾಂಟೀನ್ ನಿರ್ಮಿಸಿತ್ತು ಕೆಎಫ್ ಇನ್ಫ್ರಾ. ಮೈಸೂರಿನ ವಿಶ್ವವಿಖ್ಯಾತ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ವಿಶ್ವದ ಅತ್ಯಂತ ಎತ್ತರದ ಕ್ಲಾಕ್ ಟವರ್ ನಿರ್ಮಿಸುವ ಜವಾಬ್ದಾರಿಯೂ ಇದೇ ಕೆಎಫ್ ಇನ್ಫ್ರಾ ಹೊತ್ತುಕೊಂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News