ಹಾನಿಗೊಂಡಿರುವ ಕಾಂಕ್ರಿಟ್ ರಸ್ತೆ ಧ್ವಂಸಗೊಳಿಸಿದ ಆರೋಪ: ಗ್ರಾಪಂ ಅಧ್ಯಕ್ಷನ ವಿರುದ್ಧ ದೂರು
ಬಂಟ್ವಾಳ, ಜೂ. 21: ಕಲ್ಲಡ್ಕ-ಬಾಳ್ತಿಲ ಗ್ರಾಮದಲ್ಲಿ ರಸ್ತೆಯನ್ನು ಧ್ವಂಸಗೊಳಿಸಿದ ಆರೋಪದ ಮೇರೆಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷನೊಬ್ಬರ ವಿರುದ್ಧ ಸ್ಥಳೀಯ ನಿವಾಸಿಯೊಬ್ಬರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.
ತನ್ನ ಖಾಸಗಿ ಸ್ಥಳದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕೆ ಎಂಬವರು ಜೆಸಿಬಿ ಮೂಲಕ ಕೆಡವಿದ್ದು, ಭಾರೀ ನಷ್ಟ ಉಂಟಾಗಿದೆ. ಹಾನಿಗೊಂಡಿರುವ ರಸ್ತೆಯನ್ನು ಪುನರ್ ನಿರ್ಮಿಸುವಂತೆ ಹಾಗೂ ಜೀವ ರಕ್ಷಣೆ ಒದಗಿಸುವಂತೆ ಬೊಲ್ಪೋಡಿ ಮಾಪಲ ನಿವಾಸಿ ಕಾಂತಪ್ಪ ಪೂಜಾರಿ ಎಂಬವರು ಬಂಟ್ವಾಳ ನಗರ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.
1973ರಿಂದ ತನ್ನ ಸ್ವಾಧೀನದಲ್ಲಿರುವ ನಿವೇಶನಲ್ಲಿ ಸ್ವಂತ ಖರ್ಚಿನಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು, ತನಗೆ ತೊಂದರೆ ಕೊಡುವ ಉದ್ದೇಶದಿಂದ ರಸ್ತೆಯನ್ನು ಕೆಡವುಗೊಳಿಸಲು ಯತ್ನಿಸುತ್ತಿದ್ದ ವಿಠಲ ನಾಯ್ಕಿ, ಮೇ 31ರಂದು ಕೆಡವಲು ಬಂದಾಗ ತಾನು ಆಕ್ಷೇಪಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.