ಇಂಡೋನೇಶ್ಯ ಸರೋವರದಲ್ಲಿ ಮಗುಚಿದ ಹಡಗು: 192 ಮಂದಿ ನಾಪತ್ತೆ

Update: 2018-06-21 16:38 GMT

ಸಿಮಲುಂಗುನ್ (ಇಂಡೋನೇಶ್ಯ), ಜೂ. 21: ಇಂಡೋನೇಶ್ಯದ ಜ್ವಾಲಾಮುಖಿ ಸರೋವರವೊಂದರಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿದ್ದು ಸುಮಾರು 192 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಆದರೆ, ತೋಬಾ ಸರೋವರದಲ್ಲಿ ಸೋಮವಾರ ಹಡಗು ಮಗುಚಿದಾಗ ಅದರಲ್ಲಿ ಎಷ್ಟು ಜನರು ಇದ್ದರು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಇಂಡೋನೇಶ್ಯದ ವಿಪತ್ತು ನಿರ್ವಹಣೆ ಪ್ರಾಧಿಕಾರದ ಮುಖ್ಯಸ್ಥ ಹೇಳಿದ್ದಾರೆ.

ತೋಬಾ ಸರೋವರವು ಸುಮಾತ್ರಾ ದ್ವೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

ಸಾಂಪ್ರದಾಯಿಕ ಮರದ ಹಡಗು ಅಕ್ರಮವಾಗಿ ಜನರನ್ನು ಸಾಗಿಸುತ್ತಿರಬಹುದು ಎಂದು ಶಂಕಿಸಲಾಗಿದೆ.

ಈವರೆಗೆ ನಾಲ್ಕು ದೇಹಗಳನ್ನು ಪತ್ತೆಹಚ್ಚಲಾಗಿದೆ ಹಾಗೂ 18 ಮಂದಿಯನ್ನು ರಕ್ಷಿಸಲಾಗಿದೆ.

‘‘ಹಲವಾರು ಮಂದಿ ಟಿಕೆಟ್ ಇಲ್ಲದೆಯೇ ಹಡಗನ್ನು ಹತ್ತಿದ್ದಾರೆ. ಹಾಗಾಗಿ, ದೋಣಿಯಲ್ಲಿ ಎಷ್ಟು ಜನರಿದ್ದರು ಎನ್ನುವುದನ್ನು ನಿಖರವಾಗಿ ಪತ್ತೆಹಚ್ಚಲು ಸಾಧ್ಯವಾಗಿಲ್ಲ’’ ಎಂದು ವಿಪತ್ತು ನಿರ್ವಹಣೆ ಪ್ರಾಧಿಕಾರದ ಮುಖ್ಯಸ್ಥ ಮುಹಮ್ಮದ್ ಸ್ಯಾವುಗಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News