ಬಂಟ್ವಾಳ: ವಿದ್ಯಾರ್ಥಿಗಳ ಕೊರತೆ; ಮುಚ್ಚುವ ಹಂತಕ್ಕೆ ತಲುಪಿದ ಮೂರು ಶಾಲೆಗಳು !
ಬಂಟ್ವಾಳ, ಜೂ. 21: ಒಂದೆಡೆ ಸರಕಾರಿ ಶಾಲೆಗಳ ಶೋಚನೀಯ ಸ್ಥಿತಿ. ಮತ್ತೊಂದೆಡೆ ಸರಕಾರ, ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಸರಕಾರಿ ಶಾಲೆಗಳು ದಿನದಿಂದ ದಿನಕ್ಕೆ ಅಸ್ತಿತ್ವ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಸಾಕಷ್ಟು ಸರಕಾರಿ ಶಾಲೆಗಳು ಬಾಗಿಲೆಳೆದಿವೆ.
ಅದೇ ರೀತಿ ಬುದ್ಧಿವಂತರ ಜಿಲ್ಲೆಯೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂರು ಸರಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುವಹಂತಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದರೆ, ಪುಣಚ ಗ್ರಾಮದ ತೋರಣಕಟ್ಟೆ ಕಿ.ಪ್ರಾ. ಶಾಲೆಯಲ್ಲಿದ್ದ ನಾಲ್ಕು ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಬಾಳ್ತಿಲ ಗ್ರಾಮದ ಕಂಟಿಕ ಕಿ.ಪ್ರಾ. ಶಾಲೆಗೂ ಮಕ್ಕಳಿಲ್ಲದೆ ಕಂಟಕ ಎದುರಾಗಿದ್ದು, ನಾಲ್ಕು ಮಕ್ಕಳ ಜೊತೆ ಶಾಲೆ ಕಷ್ಟದಲ್ಲಿ ಮುನ್ನಡೆಯುತ್ತಿದೆ.
ಜಕ್ರಿಬೆಟ್ಟು ಅಧಿಕೃತವಾಗಿ ಮುಚ್ಚಿದೆ:
ಕಳೆದ 2017-18 ರ ಸಾಲಿನಲ್ಲಿ 5 ಮಕ್ಕಳ ದಾಖಲಾತಿಯೊಂದಿಗೆ ಮುನ್ನಡೆದ ಜಕ್ರಿಬೆಟ್ಟು ಕಿ.ಪ್ರಾ.ಶಾಲೆ ಈ ಸಾಲಿನಲ್ಲಿ ತಾತ್ಕಾಲಿಕ ಮುಚ್ಚಲ್ಪಟ್ಟಿದೆ. ಕಳೆದ ವರ್ಷ ಇಲ್ಲಿ ಐದು ಮಕ್ಕಳಿದ್ದರು. ಮುಂದೆ ಬೇರೆ ಮಕ್ಕಳ ದಾಖಲು ಆಗಬಹುದು ಎಂಬ ನಿರೀಕ್ಷೆಯಲ್ಲಿ ಬೇರೆ ಶಾಲೆಯತ್ತ ಹೊರಟಿದ್ದ ಮಕ್ಕಳನ್ನು ಇಲ್ಲೇ ನಿಲ್ಲಿ ಎಂದು ಒತ್ತಾಯಿಸಿದ್ದೆವು. ಪೋಷಕರಲ್ಲಿಯೂ ಮನವಿ ಮಾಡಿದ್ದೆವು. ಆದರೆ ಈ ಬಾರಿ ಹೊಸಬರು ಯಾರು ಬಂದಿಲ್ಲ. ಹೀಗಾಗಿ ಈ ವರ್ಷ ಇರಬೇಕಾಗಿದ್ದ ಮೂವರೂ ಬೇರೆ ಖಾಸಗಿ ಶಾಲೆಗೆ ಸೇರಿಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿ.
ತೋರಣಕಟ್ಟೆ ಶಾಲೆ:
ತೋರಣಕಟ್ಟೆಯ ಕಿ.ಪ್ರಾ.ಶಾಲೆಯಲ್ಲಿ ಕಳೆದ ಸಾಲಿನಲ್ಲಿ 6 ಮಕ್ಕಳು ಕಲಿಯುತ್ತಿದ್ದರು. ಕಳೆದ ವರ್ಷವೇ ಮುಚ್ಚುವ ಪ್ರಸ್ತಾಪ ಬಂದಿತ್ತಾದರೂ ಇಲ್ಲಿಗೆ ಸಮೀಪ ಕೋರೆ ಕೆಲಸಕ್ಕೆಂದು ಬಂದವರ ವಲಸೆ ಮಕ್ಕಳು ಈ ಶಾಲೆ ಸೇರಿದ್ದರು. ಒಂಭತ್ತಾಯ್ತು ಎಂದು ಖುಷಿಯಲ್ಲಿದ್ದೆವು. ಆದರೆ ಒಂದೇ ತಿಂಗಳಲ್ಲಿ ಅವರೂ ಹೋದರು. ಇದ್ದ 6 ಮಂದಿಯ ಪೈಕಿ ಇಬ್ಬರು ಮಕ್ಕಳು ಐದನೆ ತರಗತಿಯಿಂದ ಉತ್ತೀರ್ಣರಾಗಿ ಆರನೆ ತರಗತಿಗೆ ಬೇರೆ ಶಾಲೆಗೆ ಹೋಗಿದ್ದಾರೆ. ಉಳಿದ ನಾಲ್ಕು ಮಂದಿಯ ಪೈಕಿ, ಆರನೇ ತರಗತಿಗೆ ಹೋದ ವಿದ್ಯಾರ್ಥಿಯ ತಮ್ಮನೂ ಹೋಗಿ ಮೂವರು ಮಕ್ಕಳು ಮಾತ್ರ ಉಳಿದಿದ್ದರು. ಉಳಿದ ಮೂವರ ಪೈಕಿ ಹುಡುಗರು ಇಬ್ಬರು, ಹುಡುಗಿ ಒಬ್ಬಳೇ ಆಗುತ್ತಾಳೆ ಎಂದು ಅವಳನ್ನೂ ಬೇರೆ ಶಾಲೆಗೆ ಸೇರಿಸಿದರು. ಕೊನೆಗೆ ಇಬ್ಬರು ಹುಡುಗರು ಮಾತ್ರ ಉಳಿದಿದ್ದು, ಇವರು ಮಾತ್ರ ಹೇಗೆ ಕಲಿಯಲು ಸಾಧ್ಯ, ಬೇರೆ ಮಕ್ಕಳ ಜೊತೆ ಕಲಿಯಲಿ ಎಂದು ಹತ್ತಿರ ಮೂಡಂಬೈಲು ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಇದೀಗ ತೋರಣಕಟ್ಟೆ ಶಾಲೆಯಲ್ಲಿ ಮಕ್ಕಳಿಲ್ಲ ಎನ್ನುವ ಸ್ಥಿತಿ ಎದುರಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕಿಯನ್ನೂ ಹತ್ತಿರ ಬೇರೆ ಶಾಲೆಗೆ ನಿಯೋಜಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಕಂಟಿಕ ಶಾಲೆ: ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಂಟಿಕ ಕಿ.ಪ್ರಾ.ಶಾಲೆ ಕೂಡ ಮಕ್ಕಳ ಸಂಖ್ಯೆಯ ಕೊರತೆ ಎದುರಿಸುತ್ತಿದೆ. ಈ ಶಾಲೆಯಲ್ಲಿ ಪ್ರಸ್ತುತ ನಾಲ್ಕನೆ ತರಗತಿಯಲ್ಲಿ ಇಬ್ಬರು ಹಾಗೂ ಐದನೆ ತರಗತಿಯಲ್ಲಿ ಒಬ್ಬರು ಕಲಿಯುತ್ತಿದ್ದು, ಈ ವರ್ಷ ಹೊಸದಾಗಿ ಮಕ್ಕಳ ದಾಖಲಾತಿ ಆಗದೇ ಇರುವುದು ಕಂಟಿಕ ಶಾಲೆ ಮುಂದಿನ ದಿನಗಳಲ್ಲಿ ಮುಚ್ಚುವ ಸಾಧ್ಯತೆಯಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರ್ಕಾರಿ ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ ಹೆಚ್ಚು. ಆದರೆ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಕ್ಕಳ ಕೊರತೆಯನ್ನು ಎದುರಿಸುವ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಜಕ್ರಿಬೆಟ್ಟು ಶಾಲೆ ತಾತ್ಕಾಲಿಕ ಮುಚ್ಚುಗಡೆಯಾಗಿದೆ. ಸಂಘ ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲು ಇಲಾಖೆಯ ಜೊತೆ ಕೈ ಜೋಡಿಸಬೇಕು.
-ಶಿವಪ್ರಕಾಶ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ