×
Ad

ಶಿಕ್ಷಣ ಒದಗಿಸುವುದು ನೈಜ ದೇಶಪ್ರೇಮ: ಸಚಿವ ಯು.ಟಿ.ಖಾದರ್

Update: 2018-06-21 22:26 IST

ಉಳ್ಳಾಲ, ಜೂ. 21: ಮಾರ್ಗಗಳಲ್ಲಿ ನಿಂತು ಮೈಕಿನಲ್ಲಿ ಮಾತನಾಡುವುದು ನಿಜವಾದ ದೇಶಪ್ರೇಮವಲ್ಲ, ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುವುದು ನಿಜವಾದ ದೇಶಪ್ರೇಮವಾಗಿದೆ. ಈ ಉದ್ದೇಶದಲ್ಲಿ ಆರಂಭಗೊಂಡಿರುವ ಹೊಸ ರಹ್ಮಾನಿಯ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಕಾರ್ಯ ಶ್ಲಾಘನೀಯ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಉಚ್ಚಿಲಗುಡ್ಡೆಯ ಹೊಸ ರಹ್ಮಾನಿಯ ಮಸ್ಜಿದ್ ವಠಾರ ಇದರ ಹೊಸ ರಹ್ಮಾನಿಯ ಮಸ್ಜಿದ್ ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಎಸ್.ಉಚ್ಚಿಲ ಇವರ ರಹ್ಮಾನಿಯ ಆಂಗ್ಲ ಮಾಧ್ಯಮ ಶಾಲಾ ಕೊಠಡಿಯನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಗುರುವಾರ ಮಾತನಾಡಿದರು.

ಉಚ್ಚಿಲ ಭಾಗದ ಎಲ್ಲಾ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಧಾರ್ಮಿಕ, ಲೌಕಿಕ ಶಿಕ್ಷಣದ ಜೊತೆಗೆ ಸಾಮಾಜಿಕ ಶಿಕ್ಷಣವನ್ನು ಒದಗಿಸುವಲ್ಲಿ ಮದ್ರಸ ಕಮಿಟಿ ಯಶಸ್ವಿಯಾಗಿದೆ. ತರಗತಿಯಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಬಲಿಷ್ಠರಾದಲ್ಲಿ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ಜನ ಪ್ರತಿನಿಧಿಯಾಗಲಿ ಅಧಿಕಾರಿಗಳು ಬಲಿಷ್ಠರಾದಲ್ಲಿ ದೇಶ ಬದಲಾಗುವುದಿಲ್ಲ. ಆರಂಭದಲ್ಲಿ 26 ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಆರಂಭಿಸಿದ ಶಾಲೆ ಇದೀಗ 400 ವಿದ್ಯಾರ್ಥಿಗಳನ್ನು ಹೊಂದಲು ಶಾಲೆಯ ಆಡಳಿತ ಮಂಡಳಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯ ಪರಿಶ್ರಮದಿಂದ ಸಾಧ್ಯವಾಗಿದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಂದೇ ಕುಟುಂಬದವರಂತೆ ಕಾರ್ಯಾಚರಿಸಿದಲ್ಲಿ ಮಕ್ಕಳ ಹೆತ್ತವರನ್ನು ಶಾಲೆ ಆಕರ್ಷಿಸಲು ಸಾಧ್ಯ.

ಶಾಲೆಯ ಅಭಿವೃದ್ಧಿಗೆ ತನ್ನ ಇಲಾಖೆಯಿಂದ ಸಿಗುವ ಎಲ್ಲಾ ವ್ಯವಸ್ಥೆಗಳನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದು ಅವರು ತನ್ನ ಮಗಳಲ್ಲಿ ಅಂಕ ಮುಖ್ಯವಲ್ಲ, ಜೀವನದಲ್ಲಿ ಯಶಸ್ವಿಯಾಗಲು ತಾಳ್ಮೆ ಅತ್ಯಗತ್ಯ ಅನ್ನುವುದನ್ನು ಹೇಳುತ್ತಾ ಬಂದಿದ್ದೇನೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ತಾಳ್ಮೆಯಿಂದ ವರ್ತಿಸಿ, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡು ಶಿಕ್ಷಣ ಜೀವನದಲ್ಲಿ ಮುಂದುವರಿದಲ್ಲಿ ಯಶಸ್ಸು ಖಂಡಿತ ಎಂದರು.

ಇದೇ ಸಂದರ್ಭ ಸನ್ಮಾನ ಸ್ವೀಕರಿಸಿದ ಸಚಿವರು, ಶಾಲಾ ನೂತನ ಕಟ್ಟಡದ ಬ್ಲೂಪ್ರಿಂಟ್ ಬಿಡುಗಡೆಗೊಳಿಸಿದರು. ಹೊಸ ರಹ್ಮಾನಿಯಾ ಮಸೀದಿ ಹಾಗೂ ಹೆಚ್.ಐ ಎಂ ಮದರಸದ ಯು.ಅಬ್ದುಲ್ ಸಲಾ ಅಧ್ಯಕ್ಷತೆ ವಹಿಸಿದ್ದರು. ಅಬುದಾಬಿಯ ಬೇರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಿ.ಎಂ.ಮಹಮ್ಮದ್ ಆಲಿ, ಅನಿವಾಸಿ ಭಾರತೀಯ ಅಬ್ಬಾಸ್ ಪೋಕರ್, ದಮಾಮ್ ಕೋಟ್ ನ ಮರ್ಕರ್ ಮದೀನದ ಸದಸ್ಯ ಮಹಮ್ಮದ್ ಶರೀಫ್, ಫಲಾಹ್ ಎಜ್ಯುಕೇಷನ್ ಟ್ರಸ್ಟಿನ ಯು.ಬಿ.ಮಹಮ್ಮದ್ ಹಾಜಿ, ಅಬ್ಬಾಸ್ ಹಾಜಿ ಪೆರಿಬೈಲ್, ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ಆರ್ ರಶೀದ್ ಹಾಜಿ, ಹೆಚ್ .ಐ.ಎಂ ಸಂಚಾಲಕ ಅಬ್ದುಲ್ ಸಲಾಂ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಆಸೀಫ್ ಡೀಲ್ಸ್, ಮುಬಾರಕ್ ಮಸೀದಿ ಕೆ.ಸಿ.ರೋಡಿನ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಕೊಳಂಗೆರೆ, ಮರ್ಕರ್ ವಿದ್ಯಾ ಸಂಸ್ಥೆ ಅಧ್ಯಕ್ಷರು ಕೆ.ಎಂ ಅಬ್ದುಲ್ಲಾ, ಮೊಹ್ಸಿನ್ ರೆಹಮಾನ್, ಯು.ಬಿ.ರಹೀಂ, ಕಾಂಗ್ರೆಸ್ ಮುಖಂಡ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.

ಸದಸ್ಯ ಸಲಾಂ ಉಚ್ಚಿಲ್ ಸ್ವಾಗತಿಸಿದರು. ಅಬ್ದುಲ್ ನಾಸಿರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸುಕನ್ಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News