×
Ad

ಶ್ರೀಕೃಷ್ಣಪೂಜೆ ನೇರ ಪ್ರಸಾರಕ್ಕೆ ಪಲಿಮಾರುಶ್ರೀ ಚಾಲನೆ

Update: 2018-06-21 22:46 IST

ಉಡುಪಿ, ಜೂ.21: ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ನಡೆಸುವ ಶ್ರೀಕೃಷ್ಣನ ದೈನಂದಿನ ಪ್ರಾತಃಕಾಲ ಪೂಜೆಯ ನೇರಪ್ರಸಾರ ಕಾರ್ಯಕ್ರಮಕ್ಕೆ ಇಂದು ಸಂಜೆ ರಾಜಾಂಗಣದಲ್ಲಿ ಚಾಲನೆ ನೀಡಿದರು.

ಕೃಷ್ಣನ ಪೂಜೆಯ ನೇರ ಪ್ರಸಾರದಿಂದ ಬೆಳಗಿನ ಸುಪ್ರಭಾತ ಕೃಷ್ಣನ ದರುಶನದಿಂದ ಆಗಲು ಸಾಧ್ಯ. ಕೃಷ್ಣನ ಪೂಜೆ ನೇರ ಪ್ರಸಾರವಾಗುವಂತೆ ರಾಜಾಂಗಣದಲ್ಲಿ ಜರಗುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನೇರ ಪ್ರಸಾರವಾಗಬೇಕು ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.

ಅದಮಾರು ಕಿರಿಯ ಮಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ನೇರ ಪ್ರಸಾರದಿಂದ ಮನೆ ಮನೆಗಳಲ್ಲಿ ಕೃಷ್ಣದೇವರ ಅನುಸಂಧಾನ ಸಾಧ್ಯವಾಗುವಂತಾಗಿದೆ ಎಂದರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವ್ಯಾಸರಾಜ ಮಠಾಧೀಶ ಶ್ರೀವಿದ್ಯಾಶ್ರೀಶ ತೀರ್ಥರು, ಉದ್ಯಮಿ ಭುವನೇಂದ್ರ ಕಿದಿಯೂರು, ಡೆನ್ ನೆಟ್‌ವರ್ಕ್‌ನ ನಿರ್ದೇಶಕ ಎರಿಕ್ ಸಲ್ದಾನ, ಸಂಪರ್ಕ್ ಇನ್ಫೋದ ತಾಂತ್ರಿಕ ವಿಬಾಗದ ಮುಖ್ಯಸ್ಥ ರೋನಿ ಪೆರ್ನಾಂಡಿಸ್ ಉಪಸ್ಥಿತರಿದ್ದರು. ಸಿ4ಯುನ ಪಾಲುದಾರ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತ ನಾಗರಾಜ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಕನಕನ ಕಿಂಡಿಯ ಬದಲು ಮನೆಯಲ್ಲೇ ಕುಳಿತು ನೋಡಿ

ಕನಕನ ಕಿಂಡಿಯ ಮೂಲಕ ಕೃಷ್ಣನನ್ನು ನೋಡಿದರೆ ಸರಿಯಾಗಿ ಕಾಣುವುದಿಲ್ಲ ಎಂದು ಬಹಳಷ್ಟು ಮಂದಿ ಹೇಳುತ್ತಾರೆ.ಒಂದು ವೇಳೆ ನಾನು ಆ ಕಿಂಡಿ ಇಟ್ಟಿದ್ದರೆ ತೆಗೆಯುವ ಹಕ್ಕು ಇದೆ. ಆದರೆ ಅದು ಕನಕದಾಸರ ಭಕ್ತಿಗೆ ಒಲಿದು ಆದ ಕಿಂಡಿ. ಇದನ್ನು ತೆಗೆಯಬಾರದೆಂದೇ ಶ್ರೀಕೃಷ್ಣ ನೇರಪ್ರಸಾರದ ಮೂಲಕ ಮನೆಯಲ್ಲಿ ನೋಡುವಂತೆ ಆಗಿದೆ ಎಂದು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆ ಮಾಡುವಾಗ ಶ್ರೀಕೃಷ್ಣ ಕೇವಲ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಬೇಕೆಂಬುದು ಮಾತ್ರವೇ ಮಧ್ವಾಚಾರ್ಯರ ಉದ್ದೇಶವಾಗಿರಲಿಲ್ಲ. ಭಗವದ್ಭಕ್ತರ ಹೃದಯಮಂದಿರದಲ್ಲಿಯೂ ಪ್ರತಿಷ್ಠಾಪನೆ ಯಾಗಬೇಕು ಎಂಬುದು ಅವರ ಇಚ್ಛೆಯಾಗಿತ್ತು, ಈಗ ಶ್ರೀಕೃಷ್ಣಪೂಜೆಯ ನೇರ ಪ್ರಸಾರದಿಂದಾಗಿ ಈ ಸಂಕಲ್ಪಈಡೇರುತ್ತಿದೆ ಎಂದು ಪಲಿಮಾರು ಶ್ರೀಗಳು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News