ಯೋಗದಿಂದ ಮಾನಸಿಕ ನೆಮ್ಮದಿ, ಆರೋಗ್ಯ: ಮಟ್ಟಾರು
ಉಡುಪಿ, ಜೂ.21: ಭಾರತದ ಸನಾತನ ಯೋಗ ಪರಂಪರೆಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಯೋಗದಿಂದ ಮಾನಸಿಕ ನೆಮ್ಮದಿಯ ಜತೆಗೆ ಆರೋಗ್ಯ ವೃದ್ಧಿ ಹಾಗೂ ಏಕಾಗ್ರತೆ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ತಿಳಿಸಿದ್ದಾರೆ.
ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ವತಿ ಯಿಂದ ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಗುರುವಾರ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯೋಗ ಗುರು ಮಮತಾ ಮಾತನಾಡಿ, ಜೂ.21ರಂದು ಹಗಲು ಬಹಳ ಪ್ರಕಾಶಮಾನವಾಗಿ ಕಾಣುತ್ತಿದ್ದು, ಈ ದಿನದಲ್ಲಿ ಯೋಗಭ್ಯಾಸ ನಡೆಸಿದರೆ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಇದೇ ದಿನವನ್ನು ವಿಶ್ವ ಯೋಗ ದಿನಾಚರಣೆಗೆ ಆಯ್ಕೆ ಮಾಡಿಕೊಂಡಿರಬೇಕು ಎಂದರು.
ಯೋಗ ಗುರುಗಳಾದ ಮಮತಾ, ಗಣೇಶ್ ಯೋಗಾಭ್ಯಾಸದ ಬಗ್ಗೆ ವಿವರ ಗಳನ್ನು ನೀಡಿದರು. ಶ್ಯಾಮಲ್ ಕುಂದರ್, ಪೂರ್ಣಿಮಾ ಸುರೇಶ್ ನಾಯಕ್, ವೀಣಾ ಶೆಟ್ಟಿ, ಸುದರ್ಶನ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಸಹಿತ ಅನೇಕರು ಯೋಗಾಭ್ಯಾಸದಲ್ಲಿ ಭಾಗಹಿಸಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಶ್ ನಾಯಕ್ ಸ್ವಾಗತಿಸಿ ಸಂಧ್ಯಾ ರಮೇಶ್ ವಂದಿಸಿದರು.