ಉಡುಪಿ: ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಯೋಗ ದಿನಾಚರಣೆ
ಉಡುಪಿ, ಜೂ.21: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಯೋಗ ದಿನಾಚರಣೆಯು ಅಜ್ಜರಕಾಡಿನ ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ಗುರುವಾರ ಜರುಗಿತು.
ಕಾರ್ಯಕ್ರಮವನ್ನು ಲಯನ್ ವಿ.ಜಿ. ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಧನ ಕಿಣಿ ಮಾತನಾಡಿ, ಒತ್ತಡ ರಹಿತ ಜೀವನಕ್ಕೆ ಯೋಗ ಅತೀ ಅಗತ್ಯ. ಯೋಗ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುತ್ತದೆ. ಆಧ್ಯಾತ್ಮದ ಕಡೆಗೆ ಮನಸ್ಸನ್ನು ಕೊಂಡೊಯ್ಯುವ ಮೂಲಕ ಹೊಸ ಚೈತನ್ಯ ತುಂಬಿ ಆರೋಗ್ಯ ವೃದಿ್ಧಗೆ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ಉಮೇಶ್ ಪ್ರಭು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ರಾಧಿಕಾ ರವಿರಾಜ್,ಡಾ.ಜಿ.ಶಂಕರ್ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಸಮಾರಂಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ, ಅಶೋಕ್ ಹೆಗ್ಡೆ, ಇಂದಿರಾ ಹೆಗ್ಡೆ, ಕೆ. ರಾಮಚಂದ್ರ ದೇವಾಡಿಗ, ಜೂನಿಯರ್ ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಡಾ. ಅರವಿಂದ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಉಪಸಭಾಪತಿ ಡಾ.ಅಶೋಕ್ ಕುಮಾರ್ ವೈ. ಸ್ವಾಗತಿಸಿದರು. ಗೌರವ ಖಜಾಂಚಿ ಟಿ. ಚಂದ್ರಶೇಖರ್ ವಂದಿಸಿ, ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.